ಹಾಸನ : ನಗರಾದ್ಯಂತ ವ್ಯಾಪಾರ ವಹಿವಾಟು ಸ್ಥಳಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಎನ್ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೂ ಸಾಗಿತು. ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಈ ಒಂದು ತಿಂಗಳಿನಲ್ಲಿ ಮಾತ್ರ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಉಳಿದ ಸಮಯದಲ್ಲಿ ಕನ್ನಡಕ್ಕೆ ಸರಿಯಾಗಿ ಪ್ರಾಮುಖ್ಯತೆ ಸಿಗುತ್ತಿಲ್ಲ. ರಾಜ್ಯಾದ್ಯಾಂತ ಕನ್ನಡದಲ್ಲೇ ನಾಮಫಲಕಗಳನ್ನು ಅಳವಡಿಸಬೇಕು ಎಂಬುದಾಗಿ ಕರ್ನಾಟಕ ಸರ್ಕಾರ ಕಡ್ಡಾಯ ಆದೇಶ ಮಾಡಿದ್ದರೂ ಕೂಡ ಎಷ್ಟೋ ನಗರಸಭೆಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲೂ ಕೂಡ ಎಷ್ಟೋ ಕಡೆಯಲ್ಲಿ ಇವತ್ತಿಗೂ ಆಂಗ್ಲ ಭಾಷೆಯಲ್ಲೇ ನಾಮಫಲಕಗಳನ್ನು ಅಳವಡಿಸಿದ್ದಾರೆ. ಇದರ ಬಗ್ಗೆ ಹೋರಾಟ ಮಾಡಿ ಹಲವು ಬಾರಿ ತಮ್ಮ ಕಚೇರಿ ಮತ್ತು ನಗರಸಭೆಗೆ ಮನವಿ ಸಲ್ಲಿಸಿದ್ದರೂ ಕೂಡ ಮನವಿ ಸಲ್ಲಿಸಿದ ಕ್ಷಣದಲ್ಲಿ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಹೊರಗಿನಿಂದ ಬಂದ ಎಷ್ಟೋ ವ್ಯಾಪಾರಸ್ಥರು ಕಂಪನಿಯು ನೀಡುವ ಆಂಗ್ಲ ಭಾಷೆಯ ನಾಮಫಲಕಗಳನ್ನು ಅಳವಡಿಸುತ್ತಾರೆ ಎಂದು ದೂರಿದರು.
ಇತರ ರಾಜ್ಯಗಳಲ್ಲಿರುವಂತಹ ಭಾಷಾಭಿಮಾನ ಇರುವಂತೆ ನಮ್ಮ ರಾಜ್ಯದಲ್ಲಿ ಭಾಷೆಗೆ ಗೌರವ ತೋರುತ್ತಿಲ್ಲ. ಸರ್ಕಾರ, ನಗರಸಭೆ ಇವುಗಳು ಸರಿಯಾದ ಕ್ರಮವನ್ನು ತೆಗೆದುಕೊಳ್ಳದೇ ಇರುವುದರಿಂದ ನಮ್ಮ ಭಾಷೆಗೆ ಅವಮಾನವಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಯವರು ಈ ಬಗ್ಗೆ ಕೂಡಲೇ ಗಮನಹರಿಸಿ ನಗರದಾದ್ಯಂತ ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸುವಂತೆ ಆದೇಶ ನೀಡಬೇಕು. ಕನ್ನಡದಲ್ಲಿ ನಾಮಫಲಕ ಅಳವಡಿಸದೇ ಇರುವ ವ್ಯಾಪಾರಸ್ಥರ ಮೇಲೆ ಶಿಸ್ತು ಕ್ರಮಕೈಗೊಂಡು ದಂಡ ವಿಧಿಸಬೇಕು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.