ಹಾಸನ: ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸಕ್ಕೆ ಪ್ರಯತ್ನ ಪಡುವುದಕ್ಕಿಂತ ಹೆಚ್ಚು ಉದ್ಯೋಗಾಧಾರಿತ ಶಿಕ್ಷಣ ಪಡೆಯುವುದೇ ಸೂಕ್ತ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸಲಹೆ ನೀಡಿದರು. ಅವರು ನಗರದ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಾಶ್ಚಿಮಾತ್ಯ ದೇಶಗಳನ್ನು ನೋಡಿದಾಗ ಶಿಕ್ಷಣದ ಹಂತದಲ್ಲಿಯೇ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತಹ ಮತ್ತು ಉದ್ಯೋಗವನ್ನು ಪಡೆದುಕೊಳ್ಳುವಂತಹ ವಿಧಾನಗಳನ್ನು ಅಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದರೆ, ನಮ್ಮಲ್ಲಿರುವ ಶಿಕ್ಷಣ ತುಂಬ ಕಠಿಣ. ಮೊದಲು ಶಿಕ್ಷಣ ಪಡೆದು ನಂತರದಲ್ಲಿ ಉದ್ಯೋಗಕ್ಕೆ ಹುಡುಕಾಟ ನಡೆಸುತ್ತಿದ್ದೇವೆ. ನಾವು ಉದ್ಯೋಗಾಧಾರಿತ ಶಿಕ್ಷಣವನ್ನು ಪಡೆದುಕೊಳ್ಳುತ್ತಿಲ್ಲ ಎಂದರು.
ನಾವು ಹಿಂದೆ 60-70 ವರ್ಷಗಳಿಂದ ಶಿಕ್ಷಣದಲ್ಲಿ ಇಂತಹ ಬದಲಾವಣೆ ನೋಡಿರಲಿಲ್ಲ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕಳೆದ 5 ವರ್ಷಗಳಿಂದ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡುತ್ತಾ ಬರುತ್ತಿದ್ದು, ಶಿಕ್ಷಣದಲ್ಲೂ ಕೆಲ ಬದಲಾವಣೆಗಳು ಆಗಬೇಕಾಗಿದೆ ಎಂದು ಸಲಹೆ ನೀಡಿದರು.
ಹಿಂದೆ ಹೆಚ್ಚು ಶಿಕ್ಷಣ ಪಡೆಯುತ್ತಿರಲಿಲ್ಲ. ಇಂದು ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದಾರೆ. ಓದಿದವರಿಗೆಲ್ಲಾ ಸರ್ಕಾರಿ ಕೆಲಸ ಸಿಗುವುದಿಲ್ಲ. ಜನಸಂಖ್ಯೆಯ ಇರುವ ಶೇ. 5ರಷ್ಟು ಮಾತ್ರ ಸರ್ಕಾರಿ ಕೆಲಸ ಸಿಗುತ್ತದೆ. ಉಳಿದ ಶೇ. 95ರಷ್ಟು ಸ್ವಂತ ಉದ್ಯೋಗಕ್ಕೆ ಹೋಗಲೇಬೇಕು. ಆ ನಿಟ್ಟಿನಲ್ಲಿ ಓದುವಾಗಲೇ ಕನಸನ್ನು ಕಂಡು ನಿರ್ಧರಿಸಬೇಕು. ಭಾರತ ಮತ್ತು ಕರ್ನಾಟಕ ಸರ್ಕಾರಗಳು ಉದ್ಯೋಗ ಮತ್ತು ಕೈಗಾರಿಕ ತರಬೇತಿ ಸಂಸ್ಥೆಗಳ ಮೂಲಕ ಹೆಚ್ಚು ಹೆಚ್ಚು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ನೀಡುತ್ತಾ ಬಂದಿವೆ. ಅದನ್ನ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಅನೇಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. ಉದ್ಯೋಗಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಉದ್ಯೋಗ ವಿನಿಮಯಧಿಕಾರಿ ವಿಜಯಲಕ್ಷ್ಮಿ, ಸರ್ಕಾರಿ ಐಟಿಎ ಕಾಲೇಜು ಪ್ರಾಂಶುಪಾಲ ಮಂಜುನಾಥ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಜೆ.ಆರ್. ಮಂಜುನಾಥ್, ಕಾಲೇಜಿನ ಎನ್‌ಎಸ್ಎಸ್ ಘಟಕ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ ಎಂ ಶ್ರೀನಿವಾಸ್ ಹಾಗೂ ಇತರರು ಪಾಲ್ಗೊಂಡಿದ್ದರು.