ಹಾಸನ: 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಬೇಕು ಎಂಬುದು ಜೆಡಿಎಸ್ ಕಾರ್ಯಕರ್ತರ ಅಭಿಲಾಷೆಯಾಗಿದೆ. ಆದರೆ ಈ ಚುನಾವಣೆ ಸಂದರ್ಭದಲ್ಲಿ ಕಾಲವೇ ನಿರ್ಧಾರ ಮಾಡಲಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದ್ದು, ನಾಡಿನ ಜನತೆ ನಮ್ಮ ಪಕ್ಷಕ್ಕೆ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅಭಿಪ್ರಾಯಪಟ್ಟರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿ ನಾನೇ ಸಿಎಂ ಎಂಬ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದರು. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ರು. ಹಾಗಾಗಿ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಹಿಜಾಬ್, ಧರ್ಮ, ದೇವರ ಹೆಸರಿನಲ್ಲಿ ಇವತ್ತು ರಾಜಕೀಯ ಮಾಡಲಾಗುತ್ತಿದೆ. ವಿವಾದಾತ್ಮಕ ವಿಷಯಗಳನ್ನು ಸೃಷ್ಟಿಸುವ ರಾಷ್ಟ್ರೀಯ ಪಕ್ಷಗಳ ಪ್ರಯತ್ನ ಫಲಿಸಲ್ಲ ಎಂದು ಕಿಡಿಕಾರಿದರು.
ಹೆಚ್ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಸೂರಜ್ ರೇವಣ್ಣ: ನೀರಾವರಿ ಯೋಜನೆಗಳಿಗೆ ಯಾರು ಒತ್ತುಕೊಟ್ಟು ಕೆಲಸ ಮಾಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದ ಒಳ್ಳೆಯ ಕಾರ್ಯಕ್ರಮ ನೆನಪಿಸಿಕೊಂಡು ಜನರು ನಮಗೆ ಆಶೀರ್ವಾದ ಮಾಡುತ್ತಾರೆ. ಹಿತಕರವಾದ, ರೈತಪರವಾದ ಸರ್ಕಾರವನ್ನು ರಾಜ್ಯಕ್ಕೆ ಕೊಡಬೇಕು ಎಂಬ ಕಾಳಜಿಯಿಂದ ಆ ರೀತಿ ಹೇಳಿದ್ದಾರೆ ಎಂದು ಹೇಳುವ ಮೂಲಕ ಹೆಚ್ಡಿಕೆ ಹೇಳಿಕೆಯನ್ನು ಸೂರಜ್ ರೇವಣ್ಣ ಸಮರ್ಥಿಸಿಕೊಂಡರು.
ಇದನ್ನೂ ಓದಿ: 40 ಪರ್ಸೆಂಟ್ ಕಮಿಷನ್ ಆರೋಪ: ಕೆಂಪಣ್ಣ ಅವರಿಂದ ದಾಖಲೆ ಕೇಳಿದ ಕೇಂದ್ರ ಗೃಹ ಇಲಾಖೆ
ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಜೆಡಿಎಸ್ ವಾಟ್ಸಾಪ್ ಗ್ರೂಪ್ಗಳಿಂದ ಹೊರಬಂದಿರುವ ವಿಚಾರವಾಗಿ ಮಾತನಾಡುತ್ತ, ಅರಸೀಕೆರೆ ತಾಲೂಕಿನ ಎಲ್ಲಾ ಮುಖಂಡರು ನಮ್ಮ ಸಂಪರ್ಕದಲ್ಲೇ ಇದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಾನು ಅಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೇವೆ. ನಮ್ಮ ಮುಖಂಡರ ಮೇಲೆ ನಮಗೆ ವಿಶ್ವಾಸವಿದೆ. ನಿಷ್ಠೆ ಇಟ್ಟುಕೊಂಡು ಇಲ್ಲೇ ಮುಂದುವರೆಯುತ್ತಾರೆ ಎಂದರು.