ಹಾಸನ: ಮುಂದಿನ ಲೋಕಸಭಾ ಚುನಾವಣೆಗೆ ನಾವು ಕಾಂಗ್ರೆಸ್ ಸೀಟುಗಳ ಮೇಲೆ ಆಸೆ ಪಟ್ಟಿಲ್ಲ. ಎಲ್ಲರೂ ಸೇರಿ ಮಾತುಕತೆ ನಡೆಸಿ ಚುನಾವಣೆ ಎದುರಿಸಲು ಸಿದ್ಧ. ಒಂದು ವೇಳೆ ಅದೂ ಸಾಧ‍್ಯವಿಲ್ಲವೆಂದರೆ ಜೆಡಿಎಸ್ ತ್ರಿಕೋನ ಸ್ಪರ್ಧೆಗೂ ಸಿದ್ಧವಿದೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರ ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಟ್ಟ ವಿಚಾರ ಎಂದರು.
ಇನ್ನು ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಒಗ್ಗಟ್ಟಾಗಿ ಹೋಗಬೇಕು ಎಂಬುದು ನಮ್ಮ ಅಭಿಪ್ರಾಯ ಎಂದ ಅವರು, ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಸನದಲ್ಲಿ ಕೊನೆ ಬಾರಿಗೆ ಸಂಸದ ಹೆಚ್.ಡಿ.ದೇವೇಗೌಡರು ಸ್ಪರ್ಧಿಸಬೇಕು ಎಂಬುದು ನಮ್ಮ ಒಲವು. ನಾವು ಕನಿಷ್ಠ 12 ಸೀಟುಗಳು ಬೇಕು ಎಂದು ಕೇಳಿಕೊಂಡಿದ್ದೇವೆ. ಒಮ್ಮೆ ದೇವೇಗೌಡ್ರು ರಾಜ್ಯದ ಮುಖ‍್ಯಮಂತ್ರಿಯಾಗಿದ್ದಾಗ 18 ಸೀಟುಗಳನ್ನು ಗೆಲ್ಲಿಸಿ ತೋರಿಸಿರಲಿಲ್ಲವೇ ಎಂದು ಸ್ಮರಿಸಿಕೊಂಡರು.