ಹಾಸನ : ನೆರೆ ಸಂತ್ರಸ್ತರಿಗೆ ಸರಿಯಾದ ಪರಿಹಾರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನಾದ್ಯಂತ ಕಳೆದ 2 ತಿಂಗಳ ಹಿಂದೆ ಬಿದ್ದ ಮಹಾ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಹಲವಾರು ಮನೆಗಳು ಕುಸಿದಿವೆ. ಕಾಫಿ, ಕಾಳು ಮೆಣಸು, ಭತ್ತ ಹಾಗೂ ಇತರ ಎಲ್ಲಾ ರೀತಿಯ ಬೆಳೆಗಳು ಮಳೆಯಿಂದ ಬಹುತೇಕ ನಾಶವಾಗಿದೆ. ಹಳ್ಳಿಗಾಡಿನ ರಸ್ತೆ ಹಾಗೂ ಸೇತುವೆಗಳು ಸಂಪೂರ್ಣವಾಗಿ ಹಾಳಾಗಿವೆ. ಹಲವಾರು ಕೆರೆ ಕಟ್ಟೆಗಳು ಒಡೆದು ಹೋಗಿರುವುದರಿಂದ ತಾಲೂಕು ಒಂದರಲ್ಲೇ ಸಾವಿರಾರು ಕೋಟಿ ನಷ್ಟ ಸಂಭವಿಸಿದೆ.
ಹೀಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತಾಲೂಕಿಗೆ ಅಥವಾ ಜಿಲ್ಲೆಗೆ ಯಾವುದೇ ಪರಿಹಾರ ಬಂದಿಲ್ಲ. ತಾಲೂಕಿನ ಅತೀವೃಷ್ಟಿ ಪ್ರದೇಶಗಳಿಗೆ ಮಂತ್ರಿಗಳು ಬಂದು ಭೇಟಿ ನೀಡಿ ಬರಿ ಕಣ್ಣೊರೆಸುವ ತಂತ್ರ ಮಾಡಿದ್ದಾರೆಯೇ ಹೊರತು ಪರಿಹಾರ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡಿಲ್ಲ. ಸರ್ಕಾರ ಕೂಡಲೆ ಜಿಲ್ಲೆಗೆ ಕನಿಷ್ಠ ಸಾವಿರ ಕೋಟಿ ಹಾಗೂ ತಾಲೂಕಿಗೆ ಕನಿಷ್ಠ ೫೦೦ ಕೋಟಿಯಾದರೂ ಅನುದಾನ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರ ನೆರವಿಗೆ ಬರಬೇಕೆಂದು ಆಗ್ರಹಿಸಿದ್ರು
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಉಜ್ಮಾರುಜ್ವಿ, ತಾ.ಪಂ ಸದಸ್ಯೆ ರುಕ್ಮಿಣಿ ಮಲ್ಲೇಶ್, ಸೇರಿದಂತೆ ಜೆಡಿಎಸ್ ಪ್ರಮುಖರು ಭಾಗವಹಿಸಿದ್ದರು.