ಹಾಸನ: ಪ್ರಧಾನಿ ಮೋದಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ನಾನು ಹಿಂದೂ ಅಲ್ಲವೇ? ಆದರೆ, ಎಲ್ಲರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಳ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಪ್ರಧಾನಿಗೆ ಟಾಂಗ್ ಕೊಟ್ಟರು.
ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಕಲಂ 370 ಬಗ್ಗೆ ಪ್ರಧಾನಿ ಮೋದಿ, ದೇವೇಗೌಡರ ನಿಲುವು ತಿಳಿಸಬೇಕೆಂದು ಸವಾಲು ಹಾಕಿದ್ದರು. ಈ ಬಗ್ಗೆ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಲಂ 370 ಅನ್ನು ಏಕೆ ರದ್ದು ಮಾಡಬೇಕು ಎಂದು ಪ್ರಶ್ನಿಸಿದರು.
ಸೆಕ್ಷನ್ 370ನ್ನು ನಾನು ಕೊಟ್ಟಿದ್ದಲ್ಲ. ದೇಶ ಒಗ್ಗೂಡುವ ಸಂದರ್ಭದಲ್ಲಿ ಸಂವಿಧಾನದಂತೆ ಕಾಶ್ಮೀರಕ್ಕೆ ಈ ಪ್ರಾತಿನಿಧ್ಯ ನೀಡಲಾಯಿತು. ಕಾಶ್ಮೀರದ ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡೇ ಈ ಕಲಂ ನೀಡಲಾಯ್ತು. ನಾನು ಹಿಂದೂ. ನಾನೇನು ಮುಸ್ಲಿಂ ಅಥವಾ ಕ್ರಿಶ್ಚಿಯನ್ನಾ? ಎಂದು ಪ್ರಶ್ನಿಸಿದ ಅವರು, ಆದರೆ ನಮಗೆ ಎಲ್ಲರ ಹಿತಾಸಕ್ತಿ ಮುಖ್ಯ ಎಂದರು.
ಮಹಾತ್ಮಗಾಂಧಿ, ಅಂಬೇಡ್ಕರ್ ದೇಶ ಒಗ್ಗೂಡಿಸಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಆದರೆ, ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಮೋದಿ ಇಂತಹ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಬಿಜೆಪಿ ಸೋಲಿಸಲು ದೇವರ ಮೊರೆ:
ನನ್ನ ಮೊಮ್ಮಕ್ಕಳಾದ ಪ್ರಜ್ವಲ್ ಹಾಗೂ ನಿಖಿಲ್ ಸೇರಿ ಜೆಡಿಎಸ್ನ ಹಾಗೂ ಮೈತ್ರಿ ಸರ್ಕಾರದ ಎಲ್ಲಾ ಅಭ್ಯರ್ಥಿಗಳು ಗೆಲ್ಲಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್ ನಾಯಕರು ಸಹ ವಿವಿಧೆಡೆ ಪ್ರವಾಸ ಮಾಡುತ್ತಿದ್ದಾರೆ. ನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದೇ ಆಗಿದೆ ಎಂದು ಘೋಷಿಸಿದರು.
ಈಗಾಗಲೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕುಲದೇವತೆ ಪಾರ್ವತಿಗೆ ಪೂಜೆ ಸಲ್ಲಿಸಿದ್ದೇನೆ. ಹರದನಹಳ್ಳಿಯ ಈಶ್ವರ ಹಾಗೂ ದೇವೀರಮ್ಮನ ಮೊರೆ ಹೋಗಿದ್ದೇನೆ ಎಂದು ತಮ್ಮ ದೈವಭಕ್ತಿಯನ್ನು ಬಿಚ್ಚಿಟ್ಟರು.