ಹಾಸನ : ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಬಾಣಾವರ ಅಶೋಕ್‌ಗೆ ಟಿಕೆಟ್ ಕೈ ತಪ್ಪಿದ್ದು, ಅಶೋಕ್ ಬೆಂಬಲಿಗರು ಜೆಡಿಎಸ್ ಮುಖಂಡರ ಫೋಟೋ ಇರುವ ಫ್ಲೆಕ್ಸ್ಗಳನ್ನು ಹರಿದುಹಾಕಿರುವ ಘಟನೆ ನಡೆದಿದೆ. ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ಅರಸೀಕೆರೆ ಕ್ಷೇತ್ರದಿಂದ ಅಶೋಕ್‌ಗೆ ಟಿಕೆಟ್ ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಈ ಹಿಂದೆ ಅರಸೀಕೆರೆ ಕ್ಷೇತ್ರದಿಂದ ಬಾಣಾವರ ಅಶೋಕ್‌ಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ಕುಮಾರಸ್ವಾಮಿಯವರು ಅಶೋಕ್ ಅವರನ್ನು ಅರಸೀಕೆರೆ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದು, ಅದರಂತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆದರೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಎನ್.ಆರ್.ಸಂತೋಷ್ ಅವರು ದೇವೇಗೌಡರನ್ನು ಭೇಟಿ ಮಾಡಿ ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಗಂಡಸಿಯಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಅಶೋಕ್ ಬೆಂಬಲಿಗರು, ಅರಸೀಕೆರೆ ನಗರದ ಜೆಡಿಎಸ್ ಕಚೇರಿಯ ಮುಂಭಾಗದಲ್ಲಿದ್ದ ಪಕ್ಷದ ಮುಖಂಡರ ಫೋಟೋಗಳಿರುವ ಫ್ಲೆಕ್ಸ್ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಗುಂಡುಕಾನಹಳ್ಳಿ ಬಡಾವಣೆಯಲ್ಲಿರುವ ಜೆಡಿಎಸ್ ಕಚೇರಿ ಎದುರು ಪ್ರತಿಭಟನೆ ಮಾಡುವ ಮೂಲಕ ಪಕ್ಷವನ್ನು ಮತ್ತು ಪಕ್ಷದ ವರಿಷ್ಠರ ವಿರುದ್ದ ಆಕ್ರೋಶ ಹೊರಹಾಕಿದರು. ಜೊತೆಗೆ ಎನ್.ಆರ್.ಸಂತೋಷ್‌ಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದರು.
ಇದನ್ನೂ ಓದಿ : ಮದ್ದೂರಿನಲ್ಲಿ ಮುಂದುವರೆದ ಭಿನ್ನಮತ: ಡಿಕೆಶಿ ವಿರುದ್ದ ಕಾರ್ಯಕರ್ತರ ಆಕ್ರೋಶ