ಹಾಸನ: ಐಟಿ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಜಿಲ್ಲೆಯಲ್ಲಿ ಮತ್ತೆ ಏಕ ಕಾಲದಲ್ಲಿ ಒಟ್ಟು 5 ಕಡೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತರ ಮನೆಗಳ ಮೇಲೆ ಐಟಿ ಅಧಿಕಾರಿಗಳು ಸಂಜೆವರೆಗೂ ಪರಿಶೀಲನೆ ನಡೆಸಿದರು.
ಸಚಿವ ರೇವಣ್ಣ ಅವರ ಸಂಬಂಧಿ ಹೊಳೆನರಸೀಪುರ ತಾಲೂಕು ಹರದನಹಳ್ಳಿಯ ಪಾಪಣ್ಣಿ ನಿವಾಸದ ಮೇಲೆ ದಾಳಿ ನಡೆಸಿದ ತಂಡ, ಸಂಜೆವರೆಗೂ ತಪಾಸಣೆ ನಡೆಸಿತು.
ಹಾಸನದ ವಿದ್ಯಾನಗರದಲ್ಲಿರುವ ಗುತ್ತಿಗೆದಾರರಾದ ಅನಂತ್ ಕುಮಾರ್, ಕಾರ್ಲೆ ಇಂದ್ರೇಶ್ ಮನೆ, ರವೀಂದ್ರ ನಗರದಲ್ಲಿರುವ ಜೆಡಿಎಸ್ ಮುಖಂಡ ಪಟೇಲ್ ಶಿವರಾಂ ನಿವಾಸ ಮತ್ತು ಹೌಸಿಂಗ್ ಬೋರ್ಡ್ ನಲ್ಲಿರುವ ಹೆಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಅವರ ಮನೆಗಳ ಮೇಲೂ ದಾಳಿ ನಡೆಸಿದರು.
ಪೊಲೀಸ್ ಭದ್ರತೆ ನಡುವೆ ಶೋಧ ಕಾರ್ಯ
ಐದು ದಿನಗಳ ಹಿಂದೆ ಇದೇ ಹರದನಹಳ್ಳಿಯ ದೇವೇಗೌಡರ ಕುಲದೇವರು ಈಶ್ವರ ದೇವಾಲಯ ಮತ್ತು ಅರ್ಚಕರ ಮನೆ ಮೇಲೆ ಐಟಿ ಅಧಿಕಾರಿಗಳ ಸೋಗಿನಲ್ಲಿ ಅಪರಿಚಿತರಿಬ್ಬರು ದಾಳಿ ಮಾಡಿದ್ದರು. ಹಾಗಾಗಿ ಇಂದು ದಾಳಿ ನಡೆಸಲು ಬಂದ ಅಧಿಕಾರಿಗಳನ್ನು ಗುರುತಿನ ಚೀಟಿ ನೀಡುವಂತೆ ಫ್ಲೈಯಿಂಗ ಸ್ಕ್ವಾಡ್ ಅಧಿಕಾರಿ ಹೇಮಂತ್ ಕೇಳಿದರು. ಅಧಿಕಾರಿಗಳು ಕಾರಿನಿಂದ ಐಡಿ ಕಾರ್ಡ್ ತಂದು ತೋರಿಸಿದ ನಂತರ ತಪಾಸಣೆಗೆ ಅನುವು ಮಾಡಿಕೊಟ್ಟರು.
ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಸಚಿವ ರೇವಣ್ಣ, ‘ಪ್ರತಿಪಕ್ಷಗಳನ್ನು ಹಣಿಯುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಹೀಗೆಲ್ಲಾ ಮಾಡೋ ಬದಲು, ಪೊಲೀಸರು, ಐಟಿ ಅಧಿಕಾರಿಗಳ ಮೂಲಕ ಪ್ರತಿ ಪಕ್ಷದವರನ್ನು ಎಲ್ಲಾದ್ರೂ ಕೂಡಿ ಹಾಕಿ ಚುನಾವಣೆ ನಡೆಸಲಿ. ಜಿಲ್ಲಾ ಚುನಾವಣಾ ಅಧಿಕಾರಿ ರಾಜ್ಯ ಚುನಾವಣಾ ಆಯುಕ್ತರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ’ ಎಂದು ಆರೋಪಿಸಿದರು.
‘ಐಟಿ ಸ್ವಾಯತ್ತ ಸಂಸ್ಥೆ. ಅದರ ಕೆಲಸ ಅದು ಮಾಡುತ್ತಿದೆ. ಒಂದು ವೇಳೆ ರಾಜಕೀಯ ಕಾರಣ ಇದೆ ಎಂದಾದರೆ, ಸಿಬಿಐ ತನಿಖೆಗೆ ಆದೇಶ ಮಾಡಲಿ ಎಂದು ಸಿಎಂ ಕುಮಾರಸ್ವಾಮಿಗೆ ಬಿಜೆಪಿ ಅಭ್ಯರ್ಥಿ ಎ.ಮಂಜು ಒತ್ತಾಯಿಸಿದ್ದಾರೆ.