ಹಾಸನ: ರಾಷ್ಟ್ರೀಯ ಮತದಾರ ದಿನಾಚರಣೆಯಂದು ಅರ್ಹ ಯುವ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ನೋಂದಣಿ ಕುರಿತಂತೆ 2ನೇ ವಿಶೇಷ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಜ.25ರಂದು ರಾಷ್ಟ್ರೀಯ ಮತದಾನ ದಿನವನ್ನು ಕಡ್ಡಾಯವಾಗಿ ಎಲ್ಲಾ ಮತಗಟ್ಟೆಗಳಲ್ಲಿಯೂ ಆಚರಣೆ ಮಾಡಬೇಕು ಮತ್ತು ಅಂದು ಮತಪಟ್ಟಿಗೆ ಸೇರ್ಪಡೆಯಾಗಿರುವ ಯುವ ಮತದಾರರಿಗೆ ನೂತನ ಗುರುತಿನ ಚೀಟಿ ವಿತರಿಸಬೇಕು ಎಂದು ಹೇಳಿದರು.
ಎಲ್ಲಾ ತಾಲೂಕುಗಳ ಮತದಾರರ ನೋಂದಣಿ ಪಟ್ಟಿ, ಮತ ಪಟ್ಟಿಯಿಂದ ಕೈಬಿಟ್ಟ ಮೃತರ ಪಟ್ಟಿಗಳನ್ನೂ ಖುದ್ದು ಪರಿಶೀಲನೆ ನಡೆಸಿದ ಅವರು ಅನಗತ್ಯ ದಾಖಲಾತಿಗಳನ್ನು ಸಂಗ್ರಹಿಸದೆ ನಿಗದಿತವಾದವುಗಳನ್ನಷ್ಟೇ ಸ್ವೀಕರಿಸಿ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ನಡೆದ ಮಿಂಚಿನ ನೋಂದಣಿ ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯಿಂದ ಮತದಾರರ ನೋಂದಣಿ ಕಾರ್ಯಕ್ರಮವು ಬಹುತೇಕ ಯಶಸ್ವಿಯಾಗಿದೆ. ಆನ್‍ಲೈನ್‌ನಲ್ಲಿ 15,000 ಅರ್ಜಿಗಳು ಬಂದಿರುವುದು ಆಶ್ಚರ್ಯಕರ ಎಂದರು. ಜಿಲ್ಲೆಯಲ್ಲಿ ಕೇವಲ 7000 ಅರ್ಜಿಗಳು ಬಾಕಿ ಉಳಿದಿವೆ. ಶೀಘ್ರವಾಗಿ ಕಾರ್ಯ ಮುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.