ಹಾಸನ: ಇಂದಿನ ಆಧುನಿಕ ಯುಗದಲ್ಲಿ ಜಾನಪದ ಕಲೆ ನಶಿಸಿ ಹೋಗುತ್ತಿದ್ದು ಅದನ್ನು ಗುರುತಿಸಿ, ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಪಶು ವೈದ್ಯಕೀಯ ಕಾಲೇಜು ಕುಲಪತಿಗಳಾದ ಹೆಚ್.ಡಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಚಿಕ್ಕಹೊನ್ನೇನಹಳ್ಳಿಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಮೂರು ದಿನಗಳ 15 ನೇ ಅಂತರ ಕಾಲೇಜು ಯುವಜನೋತ್ಸವ, ಗೋಕುಲೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಕೆಲ ಕಡೆ ಜಾನಪದ ಕಲೆಗಳು ನಶಿಸಿ ಹೋಗುತ್ತಿದೆ. ಅವನ್ನು ನಾವು ಗುರುತಿಸಿ ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ವಿದ್ಯಾರ್ಥಿಗಳು ಓದಿನಲ್ಲಿಯೇ ಮುಳುಗಿ ಹೋಗದೇ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮತ್ತು ಜಾನಪದ ತಜ್ಞರಾದ ಗೊ.ರು ಚನ್ನಬಸಪ್ಪ, ಕೆ.ಸಿ ವೀರಣ್ಣ, ಎಂ. ನಾರಾಯಣ ಭಟ್, ದಿಲೀಪ್ ಕುಮಾರ್, ಯುವ ಜನೋತ್ಸವ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಯಶವಂತ್ ಕುಮಾರ್, ಪಶುವೈದ್ಯಕೀಯ ಮಹಾವಿದ್ಯಾಲಯ ಸಂಘಟನಾ ಸಹ ಕಾರ್ಯದರ್ಶಿ ಡಾ. ಎಸ್.ಪಿ ಸತೀಶ್ ಇತರರು ಪಾಲ್ಗೊಂಡಿದ್ದರು.