ಹಾಸನ : ಜೋಳದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಾಕಿ ಸುಟ್ಟು ಹಾಕಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಸ್ವಾಮಿ ಎಂಬ ರೈತ ಜೋಳದ ತೆನೆ ಕಟಾವು ಮಾಡಿ ಜಮೀನಿನಲ್ಲಿ ರಾಶಿ ಹಾಕಿದ್ದರು. ತಡರಾತ್ರಿ ಯಾರೋ ಕಿಡಿಗೇಡಿಗಳು ಜೋಳದ ರಾಶಿಗೆ ಬೆಂಕಿ ಹಾಕಿದ್ದಾರೆ. ಪರಿಣಾಮ ಜೋಳ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಷ್ಟಪಟ್ಟು ಜೋಳ ಬೆಳೆದಿದ್ದ ರೈತ ಕಂಗಾಲಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.
ದುಷ್ಕರ್ಮಿಗಳ ಕೃತ್ಯದಿಂದ ರೈತನಿಗೆ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಪ್ರಮಾಣದ ನಷ್ಟ ಸಂಭವಿಸಿದೆ. ಜೋಳದ ರಾಶಿಗೆ ಬೆಂಕಿ ಹಾಕಿರುವ ದುಷ್ಕರ್ಮಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಜೊತೆಗೆ ಸರ್ಕಾರ ರೈತನ ನೆರವಿಗೆ ಧಾವಿಸಿ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇನ್ನು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಬೇಲೂರು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.