ಹಾಸನ: 73ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿ ರಾಷ್ಟ್ರಧ್ವಜವನ್ನು ಕೆಳಗಿಳಿಸದೇ ಅಪಮಾನ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಿಕ್ಕಯರಗನಾಳು ಗ್ರಾಮದಲ್ಲಿ ನಡೆದಿದೆ.
ನಿನ್ನೆ ಬೆಳಗ್ಗೆ ಹಾರಿಸಿದ್ದ ಧ್ವಜವನ್ನು ಸಂಜೆ 6 ಗಂಟೆಯೊಳಗೆ ಕೆಳಗಿಳಿಸಬೇಕು. ಆದ್ರೆ ಚಿಕ್ಕಯರಗನಾಳು ಗ್ರಾಮದ ಶಾಲೆಯ ಮುಖ್ಯಶಿಕ್ಷಕ ಮಂಜೇಗೌಡ ರಾತ್ರಿ 9 ಗಂಟೆಯಾದರೂ ಬಾವುಟವನ್ನ ಕೆಳಗಿಳಿಸದೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ.
ಗ್ರಾಮದಲ್ಲಿ ಶಾಲೆ ಪ್ರಾರಂಭವಾದ ದಿನದಿಂದ, ಅಂದ್ರೆ ಕಳೆದ 20 ವರ್ಷಗಳಿಂದ ಒಂದೇ ಶಾಲೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ಮಂಜೇಗೌಡ, ಸರಿಯಾಗಿ ಶಾಲೆಗೆ ಬರುವುದಿಲ್ಲವಂತೆ. ಹೀಗಾಗಿ ಮಕ್ಕಳ ದಾಖಲಾತಿ ಕ್ಷೀಣಿಸಿತ್ತು. ಗ್ರಾಮಸ್ಥರು ಆತನನ್ನ ಬೇರೆಡೆಗೆ ವರ್ಗ ಮಾಡಿ ಮತ್ತೊಬ್ಬರನ್ನ ನೇಮಿಸಿದ್ರೆ ಮಕ್ಕಳನ್ನ ಕಳುಹಿಸುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಆಗ್ರಹವೂ ಮಾಡಿದ್ದರಂತೆ. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ 2 ವರ್ಷಗಳ ಕಾಲ ವಿದ್ಯಾರ್ಥಿಗಳಿಲ್ಲದೇ ಶಾಲೆಗೆ ಬೀಗ ಬಿದ್ದಿತ್ತು. ಬಳಿಕ ಗ್ರಾಮಸ್ಥರ ಮನವಿಗೆ ಮಣಿದ ಸರ್ಕಾರ ಮಂಜೇಗೌಡನನ್ನ ಬೇರೆಡೆಗೆ ವರ್ಗ ಮಾಡಿ ಶಾಲೆ ಪ್ರಾರಂಭಿಸಿತ್ತು. ಆದ್ರೆ ಬಳಿಕ ಮತ್ತೆ ರಾಜಕೀಯ ಬೆಂಬಲದಿಂದ ಅದೇ ಶಾಲೆಗೆ ವರ್ಗ ಮಾಡಿಸಿಕೊಂಡು ಬಂದು ಮತ್ತೆ ತನ್ನ ಚಾಳಿ ಮುಂದುವರಿಸಿದ್ದು, ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುತ್ತಿದ್ದಾನೆ ಎಂಬುದು ಗ್ರಾಮಸ್ಥರ ಆರೋಪ.
ಇನ್ನು ನಿನ್ನೆ ಬೆಳಗ್ಗೆ ಶಿಕ್ಷಕ ಮಂಜೇಗೌಡ ಗ್ರಾಮಸ್ಥರನ್ನ ಕರೆಯದೇ ತಾನೊಬ್ಬನೇ ಏಕಾಏಕಿ ಬಂದು ಧ್ವಜಾರೋಹಣ ಮಾಡಿ ಹೋಗಿದ್ದು, ರಾತ್ರಿ 9 ಗಂಟೆಯಾದರೂ ಧ್ವಜವನ್ನ ಕೆಳಗಿಳಿಸದೇ ಇದ್ದದ್ದನ್ನ ಕಂಡು ಗ್ರಾಮಸ್ಥರು ಬಿಇಒಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಧ್ವಜವನ್ನ ಇಳಿಸಲು ಶಾಲೆಗೆ ಬಂದ ವೇಳೆ ಗ್ರಾಮಸ್ಥರಿಗೂ ಶಿಕ್ಷಕನಿಗೂ ಮಾತಿನ ಚಕಮಕಿ ನಡೆದು ಬಳಿಕ ಧ್ವಜ ಇಳಿಸಿದ್ದು, ನಾಳೆಯಿಂದ ಆತ ಶಾಲೆಗೆ ಬಂದ್ರೆ ಪ್ರತಿಭಟನೆ ಮಾಡುವುದಾಗಿ ಬಿಇಒಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರಂತೆ.