ಹಾಸನ: ಒಂದು ಸಮುದಾಯದ ಮೇಲೆ ದೌರ್ಜನ್ಯ ಎಸಗುವ ದುರುದ್ದೇಶದಲ್ಲಿ ಜಾರಿಗೆ ತರಲಾಗಿರುವ ಕಾಯ್ದೆಯನ್ನು ನಾವು ಧಿಕ್ಕರಿಸುತ್ತೇವೆ. ಕೂಡಲೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೈಬಿಡುವಂತೆ ಹಿರಿಯ ಸಾಹಿತಿ ಹಾಗೂ ವಕೀಲೆ ಭಾನು ಮುಸ್ತಾಕ್ ಆಗ್ರಹಿಸಿದರು.
ನಗರದ ಹುಣಸಿನಕೆರೆ ಬಡಾವಣೆಯ ಜಿ ಎಂ ಶಾಲೆ ಆವರಣದಲ್ಲಿ ಸಂವಿಧಾನ ಜಾಗೃತಿ ವೇದಿಕೆ ವತಿಯಿಂದ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಭಾರತದ ಸಂವಿಧಾನ, ನಾಗರಿಕ ಹಕ್ಕುಗಳು ಮತ್ತು ಕರ್ತವ್ಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಆತಂಕ ಮತ್ತು ಮುಂದೇನು ಎಂಬ ಭಯದಿಂದ ಮುಸ್ಲಿಂ ಮಹಿಳೆಯರು ಇಲ್ಲಿ ಸೇರಿದ್ದಾರೆ. ಸಂವಿಧಾನ ಎಂದರೇನು, ಸಂವಿಧಾನಕ್ಕೂ ಮತ್ತು ನಮ್ಮ ದೇಶಕ್ಕೆ ಇರುವ ಸಂಬಂಧವೇನು ಎಂಬುವುದನ್ನು ತಿಳಿಸಿಕೊಡುವುದು ಈ ವಿಚಾರ ಸಂಕಿರಣದ ಉದ್ದೇಶ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ (ಎನ್‌ಆರ್‌ಸಿ) ಕಾಯ್ದೆ, ಯಾವುದನ್ನು ನೋಡಿದರೂ ಒಂದಕ್ಕೊಂದು ಪ್ರತಿಬಿಂಬವಾಗಿದೆ. ಮುಸ್ಲಿಮರನ್ನು ಧಮನ ಮಾಡುವ ಉದ್ದೇಶದಿಂದ ಈ ಕಾನೂನುಗಳನ್ನ ತರಲಾಗಿದೆ. ಇದು ಸಂವಿಧಾನಕ್ಕೆ ವಿರುದ್ಧ. ಒಂದು ಸಮುದಾಯದ ಮೇಲೆ ದೌರ್ಜನ್ಯ ಎಸಗುವ ಉದ್ದೇಶದಿಂದ ತಂದಿರುವ ಈ ಕಾನೂನುಗಳನ್ನು ನಾವು ಧಿಕ್ಕರಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ ಮಾತನಾಡಿ, ಭಾರತ ದೇಶದ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮದವರಿಗೆ ಈ ದೇಶ ಸೇರಿದೆ. ಪೌರತ್ವ ಕಾಯ್ದೆಯನ್ನು ಯಾವುದಕ್ಕೋಸ್ಕರ ಮಾಡಿದರು ಎಂಬುದು ಪ್ರಶ್ನೆಯಾಗಿದೆ. ಈವರೆಗೂ ನಾವು ಮುಸ್ಲಿಮರು ಬೇರೆಯವರು ಎಂದು ನೋಡಿಲ್ಲ. ನಮ್ಮ ರಾಜಕೀಯ ಹೋರಾಟ ಬಂದಾಗಲು ನೀವು ಕೈಜೋಡಿಸಿದ್ದೀರಿ.
ಮನುಷ್ಯ ಎಂದ ಮೇಲೆ ಎಲ್ಲರೂ ಒಂದೇ.. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಾಗಲಿ, ಮಾಜಿ ಸಚಿವ ಹೆಚ್ ಡಿ ರೇವಣ್ಣರಾಗಲಿ ಹಾಗೂ ಸಂಸದ ಪ್ರಜ್ವಲ್ ಆಗಲಿ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿ ರಾಜಕೀಯ ಮಾಡಿಲ್ಲ. ಆದ್ದರಿಂದ ಈ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಖಂಡಿಸುತ್ತೇವೆ ಎಂದರು.