ಹಾಸನ: ವರ್ಷಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬ ದೇವಿ ದರ್ಶನೋತ್ಸವ ಕಳೆದ 6 ದಿನಗಳಿಂದ ಯಾವುದೇ ಗೊಂದಲಗಳಿಗೆ ಎಡೆ ಮಾಡಕೊಡದೇ ಸುಸೂತ್ರವಾಗಿ ನಡೆಯುತ್ತಿತ್ತು. ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿದೆ. ಆದ್ರೆ ಇಂದು ಸಂಜೆ ಹಾಸನಾಂಬ ಆವರಣ ಗೊಂದಲ ಹಾಗೂ ಗದ್ದಲಕ್ಕೆ ವೇದಿಕೆಯಾಯ್ತು.
ಇಂದು ನಗರಸಭೆ ಅಧಿಕಾರಿಗಳು, ಸದಸ್ಯರು, ಕುಟುಂಬಸ್ಥರಿಗೆ ವಿಶೇಷ ದರ್ಶನದ ವ್ಯವಸ್ಥೆಯನ್ನ ಮಾಡಲಾಗಿತ್ತು. ಅದರಂತೆ ಇಂದು ಕುಟುಂಬ ಸಮೇತವಾಗಿ ನಗರಸಭೆ ಅಧಿಕಾರಿಗಳು ಹಾಗೂ ಕೌನ್ಸಿಲರ್‌ಗಳು ಕುಟುಂಬ ಸಮೇತ ದೇವಾಲಯಕ್ಕೆ ಬಂದಿದ್ರು. ಆದ್ರೆ ಅವರನ್ನ ಒಳಬಿಡಲು ಪೊಲೀಸರು ನಿರಾಕರಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯ್ತು.
ಇಂದು ನಗರಸಭೆ ಅಧಿಕಾರಿಗಳು, ಸದಸ್ಯರ ಮನೆಯವರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ನಿಜ. ಆದ್ರೆ ಈ ಮೊದಲೇ ಕಡ್ಡಾಯವಾಗಿ 3 ಗಂಟೆ ವೇಳೆಗೆ ದೇವಾಲಯಕ್ಕೆ ಬರಬೇಕೆಂದು ಸೂಚಿಸಲಾಗಿತ್ತು. ನಿಗದಿತ ಸಮಯಕ್ಕೆ ಬಾರದೇ 5 ಗಂಟೆಗೆ ಬಂದು ದೇವಿ ದರ್ಶನಕ್ಕೆ ಆಗ್ರಹಿಸಿದ್ರು. ಅಷ್ಟಾಗಿದ್ರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲವೇನೋ. ಆದ್ರೆ ಸರತಿಸಾಲಿನಲ್ಲಿ ಕಾದು ನಿಲ್ಲೋ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ 10-10 ಜನರನ್ನು ಒಳಗೆ ಬಿಡುವುದಾಗಿ ಹೇಳಲಾಗಿತ್ತು.
ದೇವಾಲಯಕ್ಕೆ ಬಂದ ಜನ ಸಿಕ್ಕಿದ್ದೆ ಚಾನ್ಸ್ ಅಂತಾ ಮನೆ ಮಂದಿ ಅಕ್ಕ ಪಕ್ಕದವರನ್ನೆಲ್ಲಾ ಕರೆದುಕೊಂಡು ತಡವಾಗಿ ಬಂದಿದಲ್ಲದೇ ಎಲ್ಲರನ್ನು, ಒಟ್ಟಿಗೆ ಒಳಬಿಡುವಂತೆ ನಗರಸಭೆ ಸದಸ್ಯರು ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಇಷ್ಟು ಜನರನ್ನೆಲ್ಲಾ ಒಟ್ಟಿಗೆ ಬಿಡೋಕೆ ಆಗಲ್ಲ, ಹಾಗೆ ಬಿಟ್ರೆ ಸರತಿ ಸಾಲಿನಲ್ಲಿ ನಿಂತಿರೋರು ಕೂಗಾಗುಡಾತ್ತಾರೆ, ನೂಕು- ನುಗ್ಗಲು ಆಗುತ್ತೆ ಅರ್ಥ ಮಾಡಿಕೊಳ್ಳಿ ಅಂತಾ ಎಷ್ಟೇ ಹೇಳಿದ್ರೂ, ಅದನ್ನ ಅರ್ಥ ಮಾಡಿಕೊಳ್ಳದೇ ಕೆಲ ನಗರಸಭೆ ಕೌನ್ಸಿಲರ್‌ಗಳು ವಾಗ್ವಾದಕ್ಕಿಳಿದ್ರು.
ಪೊಲೀಸರನ್ನೇ ತಳ್ಳಿ ಒಳನುಗ್ಗಲೆತ್ನಿಸಿದ್ರು, ಪರಿಸ್ಥಿತಿ ಕೈ ಮೀರಿದ್ದರಿಂದ ಮುಂದೇನು ಮಾಡಬೇಕೆಂದು ತಿಳಿಯದೇ ಮೂಕ ಪ್ರೇಕ್ಷಕರಾದ ಪೊಲೀಸರು ಎಲ್ಲರನ್ನೂ ಒಳ ಬಿಟ್ರು. 150ಕ್ಕೂ ಹೆಚ್ಚು ಮಂದಿ ಒಳ ನುಗ್ಗಿದ್ದರಿಂದ ನೂಕು ನುಗಲ್ಲಾಯಿತ್ತಲ್ಲದೇ, 1000ರೂ. ವಿಶೇಷ ಟಿಕೆಟ್ ಪಡೆದವರೂ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಅನಿವಾರ್ಯತೆ ನಿರ್ಮಾಣವಾಯ್ತು. ಅಷ್ಟೆ ಅಲ್ಲದೇ ಇದು ವಿಶೇಷ ಟಿಕೆಟ್ ಪಡೆದವರು ಹಾಗೂ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತಿದ್ದರಿಂದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.