ಹಾಸನ (ಆಲೂರು): ಅಕ್ರಮವಾಗಿ ಪಡಿತರ ಅಕ್ಕಿಯನ್ನು ಮಿನಿ ಟೆಂಪೋ ಮೂಲಕ ಸಾಗಿಸುತ್ತಿದ್ದ ವೇಳೆ ಸಾರ್ವಜನಿಕರೇ ವಾಹನವನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿ ಕಡಬ ಗಾಲ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ನಡೆದಿದೆ.
ಆಲೂರಿನಿಂದ ಅಕ್ರಮವಾಗಿ ಕಡಬಗಾಲ ಮೂಲಕ ಪಡಿತರ ಅಕ್ಕಿ ಸಾಗಿಸುತ್ತಿದ್ದ ವೇಳೆ ಅನುಮಾನಗೊಂಡ ಗ್ರಾಮಸ್ಥರು, ವಾಹನವನ್ನು ತಡೆದು ಪರಿಶೀಲನೆ ಮಾಡಿದಾಗ ಅಕ್ರಮವಾಗಿ 20 ಚೀಲ ಅಕ್ಕಿ ಮತ್ತು ರಾಗಿ ಸಾಗಿಸುತ್ತಿರುವುದು ಬಯಲಿಗೆ ಬಂದಿದ್ದು, ತಕ್ಷಣ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಎಪಿಎಂಸಿ ಮಾರುಕಟ್ಟೆಯಲ್ಲಿ ಅಕ್ರಮವಾಗಿ 400 ರಾಗಿ ಚೀಲಗಳನ್ನು ಸರ್ಕಾರಿ ದಾಸ್ತಾನು ಮಳಿಗೆಯಿಂದ ಖಾಸಗಿ ದಾಸ್ತಾನು ಮಳಿಗೆಗೆ ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದರು.
ಪ್ರಕರಣ ನಡೆದು ಕೇವಲ 24 ಗಂಟೆಯಲ್ಲಿ ಜಿಲ್ಲೆಯಲ್ಲಿಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಪಡಿತರ ಅಕ್ರಮ ಮಾರಾಟ ದಂಧೆ ನಡೆಯುತ್ತಿದೆ ಎಂಬ ಅನುಮಾನ ಕೂಡ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.