ಹಾಸನ: ಜಿಲ್ಲೆಯ ರೈತರ ಸ್ಥಿತಿಗತಿ ಬಗ್ಗೆ 6 ಜನ ಶಾಸಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಕೂಡಲೇ ಸರ್ಕಾರಕ್ಕೆ ನೈಜ ವರದಿಯನ್ನು ಸಲ್ಲಿಸದಿದ್ದರೆ ಕಚೇರಿ ಮುಂದೆ ಧರಣಿ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾದ ಸಮಯಕ್ಕೆ ಹೂಗಳನ್ನು ಮಾರಾಟ ಮಾಡದಿದ್ದರೆ ಹಾಳಾಗುತ್ತವೆ. ತರಕಾರಿ ವ್ಯಾಪಾರವಾಗದಿದ್ದರೆ ನಷ್ಟ ಅನುಭವಿಸಬೇಕು. ಎಲ್ಲಾ ಬೆಳೆಗಳ ವರದಿಯನ್ನು ಜಿಲ್ಲಾಧಿಕಾರಿಗಳು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕು. ಇಲ್ಲವಾದರೆ ಜೆಡಿಎಸ್ ಪಕ್ಷದ ವತಿಯಿಂದ ಡಿಸಿ ಕಚೇರಿ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದರು.
ಹೊಗೆಸೊಪ್ಪು ಬಿತ್ತನೆ ಮಾಡಬೇಕು. ಅರಕಲಗೂಡು, ಹಳ್ಳಿ ಮೈಸೂರು, ರೇಷ್ಮೆ ಬಗ್ಗೆ ಕ್ರಮ ವಹಿಸಬೆಕಿದೆ. ಮಾವು, ಸಪೋಟಾ ಹಣ್ಣಿನ ಬೆಳೆಯ ಬಗ್ಗೆಯೂ ವರದಿ ಕಳುಹಿಸಬೇಕು. ಶಾಸಕರ ಜೊತೆಯೂ ಒಂದು ಸಭೆ ನಡೆಸಿ ಚರ್ಚೆ ಮಾಡಬೇಕು. ಜಿಲ್ಲೆಯ ಹಲವು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ.
ಕೃಷಿ ಚಟುವಟಿಕೆ, ನೀರಾವರಿ ಬಗ್ಗೆ ಕ್ರಮ ಕೈಗೊಂಡು ಹೆಚ್.ಎಲ್.ಬಿ.ಸಿ. ಮೂಲಕ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಹಾಸದ 324 ಮದ್ಯದಂಗಡಿಗಳಲ್ಲಿ 27 ಮದ್ಯದ ಅಂಗಡಿ ದಾಸ್ತಾನನ್ನು ಮಾತ್ರ ಪರಿಶೀಲನೆ ಮಾಡುವಂತೆ ಆದೇಶ ನೀಡಲಾಗಿದೆ. ಹೊಳೆನರಸೀಪುರದಲ್ಲಿ 2,500 ಲೀಟರ್ ಮದ್ಯ ಮಾರಾಟ ಮಾಡಿದ್ದಾರೆ ಎಂದಿದ್ದಾರೆ. ಆದರೆ ಜಿಲ್ಲೆಯಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ಪರಿಶೀಲಿಸಲು ಶಾಸಕರು ಹೇಳಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ.
ಪ್ರಧಾನಿ ಮತ್ತು ಮುಖ್ಯಮಂತ್ರಿ ಆದೇಶ ಉಲ್ಲಂಘನೆ ಆಗಬಾರದು. ಇದರಲ್ಲಿ ಪಕ್ಷ ಬರುವುದಿಲ್ಲ ಎಂದರು. ಮದ್ಯ ಸಿಗದೇ ಅಲ್ಲಲ್ಲಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ, ಇದನ್ನು ತೆಡೆಗಟ್ಟಬೇಕು.
ಸರ್ಕಾರದಿಂದ ಬಂದಿರುವ ಹಣವನ್ನು ಯಾವ ಯಾವ ತಹಶೀಲ್ದಾರರು ಎಷ್ಟೆಷ್ಟು ಖರ್ಚು ಮಾಡಿದ್ದಾರೆ ಕೂಡಲೇ ಜಿಲ್ಲಾಧಿಕಾರಿಗಳು ಅಂಕಿ-ಅಂಶ ಸಹಿತ ತಿಳಿಸಬೇಕು ಎಂದು ಆಗ್ರಹಿಸಿದರು.