ಹಾಸನ: "ಹಿಂದೆ ಹಾಡುಹಗಲೇ ಜೆಡಿಎಸ್ ಮುಖಂಡನ ಕೊಲೆ ನಡೆದಿತ್ತು, ನಂತರ ಅಶ್ವತ್ಥನಾರಾಯಣ ಅವರ ಕಾರು ಅಡ್ಡ ಹಾಕಿದ್ದರು. ರಾಜಕೀಯವಾಗಿ ನನ್ನನ್ನು ಮುಗಿಸಲು ಸಂಚು ಮಾಡಿದ್ದಾರೆ. ನಾವು ಯಾವುದಕ್ಕೂ ಹೆದರಲಿಲ್ಲ. ಬ್ಲ್ಯಾಕ್ಮೇಲ್ ಮಾಡುವವರಿಗೆ ಕಾನೂನಿನ ಪ್ರಕಾರ ಉತ್ತರ ಕೊಡುತ್ತೇನೆ" ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ರಾಜಕಾರಣಿಗಳು ದೇವೇಗೌಡರ ಕುಟುಂಬವನ್ನು ಹೆದರಿಸೋಕೆ ಆಗದವರು ಬ್ಲ್ಯಾಕ್ಮೇಲ್ ಮಾಡ್ತಾರೆ. ಕಾನೂನು ಪ್ರಕಾರ ಏನು ಇದೆ, ಅದೆ ರೀತಿ ಮಾಡುವುದಾಗಿ ಎಚ್ಚರಿಸಿದರು.
"ಕೆಲವರು ಸಂಸದ ಪ್ರಜ್ವಲ್ ಏನೂ ಮಾಡಿಲ್ಲ ಅಂತಾರೆ. ನಾಲ್ಕು ವರ್ಷ ಆತನಿಗೆ ಯಾವ ರೀತಿ ಕೊಡಬಾರದ ನೋವು ಕೊಟ್ಟಿದ್ದಾರೆ. ಎಲ್ಲವೂ ಗೊತ್ತಿದೆ. ಇದಕ್ಕೆ ಕೆಲ ರಾಜಕಾರಣಿಗಳ ಬೆಂಬಲ ಇದೆ. ರಾಜ್ಯ ಮತ್ತು ಜಿಲ್ಲೆಯವರು ಕೈಜೋಡಿಸಿದ್ದಾರೆ. ಚುನಾವಣೆಗೆ ನನ್ನ ಮಗನನ್ನೆ ನಿಲ್ಲಿಸಬೇಕಿಲ್ಲ. ದೇವೆಗೌಡರು, ಕುಮಾರಸ್ವಾಮಿ ಬಂದರೂ ಸರಿ, ನನ್ನ ಮಗನೇ ನಿಲ್ಲಬೇಕು ಎಂದು ನಾನು ಹೇಳಲ್ಲ" ಎಂದರು.
"ಹಾಸನ ಫ್ಲೈಓವರ್, ಹಾಸನ-ಚಿಕ್ಕಮಗಳೂರು ರೈಲ್ವೆ ಯೋಜನೆ ಮಾಡಿಸಿದ್ದು ಪ್ರಜ್ವಲ್ ಅಲ್ವಾ. ಯಡೇಗೌಡರನಹಳ್ಳಿ ನಾಲ್ಕು ಪಥ ರಸ್ತೆ ಮಾಡಿದ್ದು ಯಾರು?. ಜಿಲ್ಲೆಯಲ್ಲಿ ಏನೂ ಕೆಲಸ ಎಂದು ಮುಂದೆ ಹೇಳುವೆ. ಇವತ್ತು ಯಾರಿಗೆ ಏನು ಬೇಕಾದ್ರೂ ಬ್ಲ್ಯಾಕ್ಮೇಲ್ ಮಾಡಿಕೊಳ್ಳಲಿ. ಕೆಲವರ ಮಾತಿಗೆ ನಾನು ಉತ್ತರ ಕೊಡಲ್ಲ. 40 ವರ್ಷಗಳಿಂದ ರಾಜಕಾರಣ ಮಾಡಿದ್ದೇವೆ. ಕೆಲವರ ಆರೋಪಕ್ಕೆ, ಅಪಪ್ರಚಾರಕ್ಕೆ ಕಾನೂನು ರೀತಿ ಉತ್ತರ ಕೊಡುವೆ. ವ್ಯಕ್ತಿತ್ವ ಇಲ್ಲದವರಿಗೆ ನಾನು ಉತ್ತರ ಕೊಡಲ್ಲ" ಎಂದು ಹೇಳಿದರು.
"ನಾನು ಯಾವುದೇ ತನಿಖೆಗೂ ಸಿದ್ಧ. ನಮ್ಮ ಕುಟುಂಬ ಬೇನಾಮಿ ಆಸ್ತಿ ಮಾಡಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ. ಅದೇನೋ ತೋರಿಸುವೆ ಅಂದಿದ್ದಾರಲ್ಲ ತೋರಿಸಲಿ. ಆಮೇಲೆ ನಾನೇನು ಎಂದು ತೋರಿಸುವೆ. ಇಂಥವರನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಬಿಜೆಪಿಗೆ ಇಂಥ ಪರಿಸ್ಥಿತಿ ಬರಬಾರದಿತ್ತು, ಇಂಥವರನ್ನು ಇಟ್ಟುಕೋಬೇಕು ಅಂದರೆ ನಾನೇನು ಮಾಡಲು ಆಗಲ್ಲ. ಕೆಲ ಶಕ್ತಿಗಳು ಬ್ಲ್ಯಾಕ್ಮೇಲ್ ಮಾಡುವವರ ಜೊತೆ ಸೇರಿದ್ದಾರೆ. ಜನ, ದೇವರು ನಮ್ಮ ಮುಗಿಸಬೇಕು ಬೇರೆಯವರು ಏನೂ ಮಾಡಲಾಗಲ್ಲ. ನಾನು ರಾಜಿಗೆ ಯಾರನ್ನೂ ಕಳಿಸಿಲ್ಲ ಅದರ ಅಗತ್ಯ ಇಲ್ಲ ಎಂದಿದ್ದಾರೆ.ಅಂಥವರನ್ನು ನಾನು ಹತ್ತಿರ ಸೇರಿಸಲ್ಲ, ಸೂರಜ್ ವಿರುದ್ಧ ಕೇಸ್ ಹಾಕಿದ್ದರೂ ಏನಾಯ್ತು. ನನ್ನ ವಿರುದ್ಧವೂ ಹಾಕಿದ್ದರೂ ಏನೂ ಮಾಡಲು ಆಗಲ್ಲ. ನಾನು ಅನ್ಯಾಯ ಮಾಡಿದ್ದರೆ ಮಾಧ್ಯಮದವರು ತೋರಿಸಲಿ. ಸಮಾಜದಲ್ಲಿ ಮಹತ್ವ ಇಲ್ಲದವರಿಗೆ ಬೆಲೆ ಕೊಡಬೇಡಿ" ಎಂದರು.
"9 ತಿಂಗಳಿಂದ ಎಲ್ಲಿಗೆ ಹೋಗಿದ್ದರು ಚುನಾವಣೆ ಹೊತ್ತಲ್ಲಿ ಏಕೆ ಎಂದು ಪ್ರಶ್ನಿಸಿದ್ದಾರೆ. ಎಲ್ಲದಕ್ಕೂ ಕಾನೂನು ರೀತಿ ಉತ್ತರ ಕೊಡುವೆ. ದೇಶಕ್ಕೆ ಮೋದಿ ಬೇಕು ಎಂದು ಬೆಂಬಲ, ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದಕ್ಕೆ ನಾನು ಬದ್ಧ. ಎಂಟು ಜಿಲ್ಲೆಯ ಕೊಬ್ಬರಿ ಬೆಳೆಗಾರರು ಸಂಕಷ್ಟದಲ್ಲಿದ್ದರು. ಈಗಿನ ರಾಜ್ಯ ಸರ್ಕಾರ ನಾವು ಅಧಿಕಾರಕ್ಕೆ ಬಂದರೆ 15 ಸಾವಿರ ರೂ. ಕೊಡುತ್ತೇವೆ ಎಂದಿದ್ದರು. ನಾವು ವಿಧಾನಸಭೆಯಲ್ಲಿ ಹೋರಾಟ ಮಾಡಿದ್ದೇವು. ಕಾಂಗ್ರೆಸ್ ಮುಖಂಡರು ಮಾಡಲಿಲ್ಲ. ಚುನಾವಣೆ ಗೆಲ್ಲಲು ಆಶ್ವಾಸನೆ ನೀಡಿದರು, ಈಗ ಮಾತೇ ಇಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರಕ್ಕೆ ನೈತಿಕತೆ ಇದ್ದರೆ 12 ಸಾವಿರ ರೂ. ಜೊತೆಗೆ 3 ಸಾವಿರ ರೂ. ನೀಡಲಿ. ಇಲ್ಲಅಂದರೆ ನಾವು ವಚನ ಭ್ರಷ್ಟರು, ಮೊದಲು ಹೇಳಿದ್ದು ಸುಳ್ಳು ಎಂದು ರೈತರ ಬಳಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ. ಒಂದೂವರೆ ಸಾವಿರ ಬದಲು 3 ಸಾವಿರ ರೂ. ಬೆಂಬಲ ಬೆಲೆ ನೀಡಲಿ" ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ