ಹಾಸನ: ಮಲಗಿದ್ದ ಮಡದಿಯ ಮೇಲೆ ಪತಿಯೇ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಮುಂದಾಗಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಮಹಿಳೆ ಇಂದು ಕೊನೆಯುಸಿರೆಳೆದಿದ್ದಾರೆ. ಮಾ.5 ರಂದು ಹೆಂಡತಿಯ ಶೀಲದ ಮೇಲೆ ಅನುಮಾನಪಟ್ಟು ಆಕೆ ಮಲಗಿದ್ದಾಗ ಪತಿ ಸತೀಶ್ ಸೀಮೆಎಣ್ಣೆ ಸುರಿದು ಕೊಲ್ಲಲು ಪ್ರಯತ್ನಪಟ್ಟಿದ್ದ.
ಅನುಮಾನದಿಂದ ಹೆಂಡತಿಗೆ ಬೆಂಕಿ ಹಚ್ಚಿದ ಗಂಡ: ಇವರಿಬ್ಬರು ಪ್ರೀತಿಸಿ ಮದುವೆಯಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮರಡಿಕೆರೆ ಗ್ರಾಮದಲ್ಲಿ ಸಂತೋಷದ ಜೀವನ ಸಾಗಿಸುತ್ತಿದ್ದರು. ಆದರೆ ಹೆಂಡತಿ ಮೇಲೆ ಅನುಮಾನ ಪಟ್ಟ ಸತೀಶ್ ಇದೀಗ ಅವರ ಸಾವಿಗೆ ಕಾರಣವಾಗಿದ್ದಾನೆ. ಆಕೆ ಬದುಕುಳಿದಿದ್ದಾಗ ಗ್ಯಾಸ್ ಲೀಕ್ ಆಗಿ ಈ ರೀತಿ ಆಯಿತು ಎಂದು ಪೊಲೀಸರ ಮುಂದೆ ಬಲವಂತದ ಹೇಳಿಕೆ ಕೊಡಿಸಿದ್ದ.
ಆದರೆ, ತನಿಖೆ ವೇಳೆ ಇದು ಸಹಜ ಕೃತ್ಯವಲ್ಲ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಬಯಲಾಗಿದೆ. ಪತಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಾವು - ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಮಹಿಳೆಯನ್ನ ಹಾಸನದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ: ಆಸ್ಪತ್ರೆಯ ಮಹಡಿಯಿಂದ ಜಿಗಿದು ರೋಗಿ ಆತ್ಮಹತ್ಯೆ
ಇದೀಗ 26 ದಿನದ ಬಳಿಕ ಭವ್ಯಾ (23) ಮೃತಪಟ್ಟಿದ್ದಾರೆ. ಮಹಿಳೆಯ ದೇಹ ಶೇ.70 ರಷ್ಟು ಸುಟ್ಟು ಹೋಗಿತ್ತು. 26 ದಿನಗಳಿಂದ ನರಕಯಾತನೆ ಅನುಭವಿಸಿದ್ದ ಭವ್ಯಾ ಇಂದು ಉಸಿರು ಚೆಲ್ಲಿದ್ದಾರೆ. ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಈ ಜೋಡಿ ಮದುವೆಯಾಗಿತ್ತು. ಆದರೆ ಪತ್ನಿ ಮೇಲೆ ಪತಿಗೆ ಅನುಮಾನ ಶುರುವಾದ ಹಿನ್ನೆಲೆ ಹಲವು ಬಾರಿ ಇಬ್ಬರು ಜಗಳವಾಡುತ್ತಿದ್ದರು. ಈ ಘಟನೆ ಸಂಬಂಧ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.