ಹಾಸನ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನಿಂದ ಗ್ರಾಮೀಣ ಜನರು ಹೈರಾಣಾಗಿದ್ದಾರೆ. ಈ ನಡುವೆ ಸೀಲ್ಡೌನ್ ಆಗಿದ್ದ ಜಾಗವನ್ನು ಕೆಲ ಕಿಡಿಗೇಡಿಗಳು ತೆರವುಗೊಳಿಸಿದ ಹಿನ್ನೆಲೆ ಎಚ್ಚೆತ್ತ ತಾಲೂಕು ಆಡಳಿತ ಗ್ರಾಮಕ್ಕೆ ಬಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಮತ್ತು ಜಿಲ್ಲಾಡಳಿತ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಸರ್ಕಾರ ನಗರ ಪ್ರದೇಶವನ್ನು ಹಿಂದೆ ಸೀಲ್ಡೌನ್ ಮಾಡುತ್ತಿದ್ದ ರೀತಿಯಲ್ಲಿಯೇ ಈಗ ಗ್ರಾಮೀಣ ಭಾಗದ ಹಳ್ಳಿಗಳನ್ನು ಸೀಲ್ ಡೌನ್ ಮಾಡಿ ಕೊರೊನಾ ತಡೆಗಟ್ಟಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆದ್ರೆ ಸೋಂಕಿತರು ಇದನ್ನು ವಿರೋಧಿಸುತ್ತಿದ್ದಾರೆ. ಕಾರಣ ಸೀಲ್ಡೌನ್ ಮಾಡುವ ಮುನ್ನ ನಮಗೆ ಆಹಾರದ ಕಿಟ್ ಮತ್ತು ಮೂಲ ಸೌಕರ್ಯ ಒದಗಿಸಿ, ಬಳಿಕ ಸೀಲ್ಡೌನ್ ಮಾಡಿ ಎಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ರು.
ಆದ್ರೆ ಇದ್ಯಾವುದನ್ನು ಲೆಕ್ಕಿಸದ ತಾಲೂಕು ಆಡಳಿತ 54 ಮಂದಿಗೆ ಸೋಂಕು ತಗುಲಿದ ಹಿನ್ನೆಲೆ ಏಕಾಏಕಿ ಧರ್ಮಪುರಿ ಗ್ರಾಮವನ್ನು ಸೀಲ್ ಡೌನ್ ಮಾಡಿದೆ. ಆಹಾರದ ಕಿಟ್ ಸೇರಿದಂತೆ ಮೂಲ ಸೌಲಭ್ಯ ನೀಡದೆ ಸೀಲ್ ಡೌನ್ ಮಾಡಿದ ಹಿನ್ನೆಲೆ ಸೋಂಕಿತರಲ್ಲಿಯೇ ಕೆಲವರು ರಾತ್ರೋರಾತ್ರಿ ಸೀಲ್ಡೌನ್ ಮಾಡಿದ್ದ ಪ್ರದೇಶವನ್ನು ತೆರವುಗೊಳಿಸಿದ್ದಾರೆ. ಸದ್ಯ ಆ ಪ್ರದೇಶವನ್ನು ಮತ್ತೆ ತಾಲೂಕು ಆಡಳಿತ ಸೀಲ್ ಡೌನ್ ಮಾಡಿದ್ದು, ಸ್ಥಳಕ್ಕೆ ಸ್ಥಳೀಯ ಶಾಸಕ ಮತ್ತು ತಾಲೂಕು ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಈ ಸಂದರ್ಭ ಗ್ರಾಮಸ್ಥರು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ನಾವು ಹೈನುಗಾರಿಕೆಯನ್ನು ನಂಬಿ ಬದುಕು ಸಾಗಿಸುತ್ತಿದ್ದೇವೆ. ಆದ್ರೆ ಸೋಂಕು ಬಂದಿರುವವರನ್ನು ಹೊರತುಪಡಿಸಿ ಉಳಿದವರು ಓಡಾಡದಂತೆ ನಿರ್ಬಂಧ ಹೇರಿರುವುದು ಖಂಡನೀಯ. ಇಲ್ಲ ಸಂಪೂರ್ಣ ಸೀಲ್ಡೌನ್ ಮಾಡುವ ಮೂಲಕ ಗ್ರಾಮಸ್ಥರಿಗೆ ಆಹಾರ ಕಿಟ್ ನೀಡಿದ್ರೆ ಉತ್ತಮ. ಏನೂ ಇಲ್ಲದೆ ಈ ರೀತಿ ಸೀಲ್ ಡೌನ್ ಮಾಡಿದ್ರೆ ನಾವು ಏನನ್ನು ತಿನ್ನಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.