ಸಕಲೇಶಪುರ(ಹಾಸನ): ಹೇಮಾವತಿ ಜಲಾಶಯ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ಭೂ ಮಂಜೂರಾತಿ ಆರೋಪದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ್ ಎಂಬುವರನ್ನು ಪಟ್ಟಣ ಪೋಲಿಸರು ಬಂಧಿಸಿದ್ದಾರೆ.
ಎಚ್.ಆರ್.ಪಿ ಪ್ರಕರಣದಲ್ಲಿ ಖೆಡ್ಡಾಕ್ಕೆ ಬಿದ್ದ ಮೊದಲ ಅಧಿಕಾರಿ ಮಂಜುನಾಥ್, ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಕಲಿ ಸಂತ್ರಸ್ತರ ಪ್ರಮಾಣ ಪತ್ರ ತಯಾರಿಸಿ 8 ಎಕರೆ ಭೂಮಿ ಮಂಜೂರಾತಿ ಆರೋಪದ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದೆ.
ಘಟನೆ ಸಂಬಂಧ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದರು. ಸತೀಶ್ ಹಾಗೂ ಜನಾರ್ಧನ್ ಎಂಬುವವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಮಾಡಿ ಅಕ್ರಮ ಮಂಜೂರಾತಿ ಮಾಡಲು ಖದೀಮರ ತಂಡ 20 ಲಕ್ಷ ಹಣ ಪಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರದೀಪ್, ಭರತ್, ಜನಾರ್ಧನ್ ಎಂಬುವರ ಬಂಧನವಾಗಿದೆ.
ಕಂದಾಯ ನಿರೀಕ್ಷಕ ಮಂಜುನಾಥ್ ರವರಿಗೆ ಲಕ್ಷಗಟ್ಟಲೆ ಹಣ ನೀಡಿದ್ದೇನೆ ಎಂಬ ಪ್ರದೀಪ್ ಕುಮಾರ್ ಹೇಳಿಕೆ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಮಂಜೂರಾತಿ ಪತ್ರ ಸೃಷ್ಟಿಸಿ ಅಕ್ರಮ ಎಸಗಿದ್ದರೆಂಬ ಆರೋಪದ ಮೇಲೆ ಸಕಲೇಶಪುರ ನಗರ ಠಾಣೆ ಪೊಲೀಸರಿಂದ ಆರ್.ಐ.ಮಂಜುನಾಥ್‌ರನ್ನು ಬಂಧಿಸಿ ವಿಚಾರಣೆಗೆ ಒಳಪಿಡಿಸದ್ದಾರೆ.