ಹಾಸನ : ಜಿಲ್ಲೆಯ ವಿವಿಧೆಡೆ ನಿನ್ನೆ ತಡರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಮಳೆಗೆ ಹಲವೆಡೆ ಅವಘಡಗಳು ಸಂಭವಿಸಿವೆ.
ಸಕಲೇಶಪುರದಲ್ಲಿ ನಿನ್ನೆ 20 ಮಿಲಿಮೀಟರ್ ಮಳೆಯಾಗಿದೆ. ಹಾಸನ ತಾಲೂಕಿನ ಆಗಲೇ ಗ್ರಾಮದ ಆಸ್ಪತ್ರೆಯ ಮೇಲ್ಛಾವಣಿ ಹಾರಿಹೋಗಿದೆ. ಹಾಸನದ ತಣ್ಣೀರುಹಳ್ಳ ಬಳಿ ಹಾಕಿದ್ದ ತಗಡಿನ ಶೀಟ್ಗಳು ಹಾರಿಹೋಗಿವೆ. ವಿದ್ಯಾನಗರದಲ್ಲಿ ಕಾರಿನ ಮೇಲೆ ತೆಂಗಿನ ಮರ ಬಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಬಿರುಗಾಳಿ ಸಹಿತ ಗುಡುಗು-ಸಿಡಿಲಿನ ಆರ್ಭಟಕ್ಕೆ ಬಯಲುಸೀಮೆ ಅರಸೀಕೆರೆಯಲ್ಲಿ ಕೂಡ ಭರ್ಜರಿ ಮಳೆಯಾಗಿದ್ದು, ರಸ್ತೆ ಚರಂಡಿಗಳಲ್ಲಿ ನೀರು ನದಿಯಂತೆ ಹರಿದಿದೆ.
ಅರಸೀಕೆರೆಯ ಚೌಡೇಶ್ವರಿ ನಗರದ ಧನಂಜಯ್, ಪುಟ್ಟರಾಜು ಹಾಗೂ ಜಯಣ್ಣ ಎಂಬುವರ ಮನೆಗಳು ಮತ್ತು ಶಿವಾಲಯದ ಸುತ್ತಮುತ್ತಲಿನ ಬಹುತೇಕ ಮನೆಗಳ ಶೀಟ್ ಹಾರಿಹೋಗಿವೆ. ನಗರದ ತಗ್ಗು ಪ್ರದೇಶದ ಬಡಾವಣೆಗಳಾದ ಚೌಡೇಶ್ವರಿ ನಗರ, ಇಂದಿರಾನಗರ, ಸರಸ್ವತಿಪುರಂ, ಹಾಸನ ರಸ್ತೆಯ ಎಡ ಹಾಗೂ ಬಲಭಾಗದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರಿತಪಿಸುವಂತಾಯಿತು. ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಸೇರಿ ಹಲವೆಡೆ ಮರಗಳು ಬುಡ ಮೇಲಾಗಿದ್ದು, ಗಂಡಿಸಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಜಾನುವಾರುಗಳು ಮೃತಪಟ್ಟಿರುವ ಘಟನೆ ಕೂಡ ನಡೆದಿದೆ.
ಜಿಲ್ಲೆಯಾದ್ಯಂತ ವರುಣ 2-3 ದಿನಗಳಿಂದ ಗುಡುಗು-ಸಿಡಿಲಿನ ಆರ್ಭಟ ಶುರುಮಾಡಿದ್ದು, ನಿನ್ನೆಯಿಂದ ಪ್ರಾರಂಭವಾಗಿರುವ ರೋಹಿಣಿ ಮಳೆ ಕೂಡ ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳನ್ನು ಸೃಷ್ಟಿಸಿದೆ. ರೈತಾಪಿ ವರ್ಗಕ್ಕೆ ಒಂದು ಕಡೆ ಖುಷಿಯನ್ನ ತಂದರೆ, ಹಾಗೇಯೆ ಆತಂಕವನ್ನೂ ಕೂಡ ಉಂಟುಮಾಡಿದೆ.