ಹಾಸನ : ನಗರ ಸೇರಿ ಜಿಲ್ಲೆಯಾದ್ಯಂತ ಶುಕ್ರವಾರ ಜೋರು ಮಳೆ ಸುರಿದಿದೆ. ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಮಳೆ ದಿನಪೂರ್ತಿ ಅಬ್ಬರಿಸಿದ್ದು, ಭಾರಿ ವ್ಯತ್ಯಯ ಉಂಟು ಮಾಡಿದೆ.
ಮಳೆರಾಯ ಜಿಲ್ಲೆಯ ಆಲೂರು, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಅರಕಲಗೂಡು ಭಾಗದಲ್ಲಿ ಬಿಡುವು ನೀಡದೆ ಸುರಿದರೆ, ಹೊಳೆನರಸೀಪುರ, ಬೇಲೂರು ಹಾಗೂ ಅರಸೀಕೆರೆ ವ್ಯಾಪ್ತಿಯಲ್ಲಿ ಆಗಾಗ ಬಿಡುವು ನೀಡಿ ಮಳೆಯಾಯಿತು. ನಿರಂತರ ಮಳೆಯಿಂದ ಹೇಮಾವತಿ ಜಲಾಶಯ ಒಳಹರಿವು 4096 ಕ್ಯೂಸೆಕ್‌ಗೆ ಹೆಚ್ಚಿದೆ. 2922ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2892.35 ಅಡಿ ನೀರಿದೆ.
ಬಿಡದೆ ಸುರಿಯುತ್ತಿರುವ ಮಳೆಯಿಂದ ಜನರು ಹೈರಾಣಾಗಿದ್ದಾರೆ. ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಚೇರಿ ಹಾಗೂ ವಿವಿಧ ಕೆಲಸಗಳಿಗಾಗಿ ತೆರಳುವ ಜನರು ತೊಂದರೆ ಅನುಭವಿಸುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಮಳೆ ಅವಶ್ಯವಾಗಿ ಬೇಕು. ಆದರೆ, ಅದು ನಗರಗಳಲ್ಲಿ ಸುರಿದು ಜನ ಜೀವನ ಅಸ್ತವ್ಯಸ್ಥವಾಗುತ್ತಿದೆ. ಬೀದಿ ಬದಿ ವ್ಯಾಪಾರ ಮಾಡುವವರ ಪಾಡು ಹೇಳತೀರದಾಗಿದೆ. ಗಂಟೆಗಟ್ಟಲೆ ಮಳೆ ನಡುವೆಯೇ ಕುಳಿತು ಕೆಸರಿನಲ್ಲಿ ಪರದಾಡಬೇಕಾಗಿದೆ. ಹಣ ಸುರಿದು ಖರೀದಿಸಿ ತಂದ ಮಾಲು ವ್ಯಾಪಾರವಾಗದೆ ನಷ್ಟ ಅನುಭವಿಸಬೇಕಾಗಿದೆ.
ಕೊರೊನಾ ವೈರಸ್ ದಿನೇದಿನೆ ಹರಡುತ್ತಾ ಆಸ್ಪತ್ರೆ ತುಂಬಿದೆ. ಇಷ್ಟಲ್ಲದೆ ನಿತ್ಯ ಸಾವುಗಳು ಸಂಭವಿಸುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮಧ್ಯೆ ಈ ಮಳೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ವ್ಯಾಪಾರಸ್ಥರು ಹಾಗೂ ಬೀದಿ ಬದಿ ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.