ಹಾಸನ: ಮುಂದಿನ 3 ದಿನಗಳ ಕಾಲ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನ ಹವಾಮಾನ ಇಲಾಖೆ ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದಾನೆ. ಮಧ್ಯಾಹ್ನದಿಂದ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳು ನದಿಗಳಂತಾಗಿದ್ದು, ಕೆಲವೆಡೆ ಅವಘಡ ಸಂಭವಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಸಹ ಮಳೆಯ ಅಬ್ಬರ ಮುಂದುವರೆದಿದೆ. ರಾಜ್ಯದಲ್ಲಿಯೂ ಫಣಿ ಚಂಡಮಾರುತದ ಎಫೆಕ್ಟ್ ಜೋರಾಗಿದ್ದು, ಮೊನ್ನೆ ಬೆಂಗಳೂರಿನಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇಂದು ಸಂಜೆ ದಿಢೀರ್ ಮಳೆ ಬಂದಿದ್ದರಿಂದ ಜನಜೀವನ ಅಸ್ತವ್ಯಸ್ತವಾಯ್ತು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣದ ತಗ್ಗು ಪ್ರದೇಶದಲ್ಲಿರುವ ಬಾಗೂರು ರಸ್ತೆ ಮಳೆಯಿಂದ ನದಿಯಂತಾಗಿತ್ತು. ಅಲ್ಲದೆ ಕುವೆಂಪು ನಗರ, ಗಾಯಿತ್ರಿ ಬಡಾವಣೆ, ರಾಮೇಶ್ವರ ಬಡಾವಣೆಯ ರೈಲು ನಿಲ್ದಾಣದ ಸಮೀಪ ನೀರು ನಿಂತಿದ್ದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಯ್ತು.
ಇನ್ನು ರೇಣುಕಾಂಬ ರಸ್ತೆ, ಬಿ.ಎಂ.ರಸ್ತೆಯ ಕಾಫಿ ಶಾಪ್ ಒಂದರ ಮೇಲ್ಚಾವಣಿ ಹಾರಿಹೋಗಿದೆ. ಮಖಾನ್ ರಸ್ತೆಯ ಇಕ್ಕೆಲಗಳಲ್ಲಿ ಹರಿಯುತ್ತಿದ್ದ ನೀರನ್ನ ನೋಡಿದ್ರೆ ಪ್ರವಾಹದ ರೀತಿಯಲ್ಲಿತ್ತು. ಇನ್ನು ಮಳೆಯ ನಡುವೆಯೇ ಬಿರುಗಾಳಿ ಇದ್ದದ್ದರಿಂದ ಪಟ್ಟಣದ ಜನತೆಗೆ ಸ್ಪಲ್ಪ ಭಯದ ವಾತಾವರಣ ಸೃಷ್ಠಿಯಾಗಿತ್ತು. ಶೆಟ್ಟಿಹಳ್ಳಿ, ನಂದಿಪುರ, ಜೋಗಿಪುರ, ಜನಿವಾರ, ಶ್ರವಣೇರಿ ಭಾಗದಲ್ಲಿಯೂ ಕೂಡ ಉತ್ತಮ ಮಳೆಯಾಗಿದ್ದು, ಗದ್ದೆ ಮತ್ತು ತೋಟಗಳಲ್ಲಿ ನೀರು ನಿಂತಿದೆ.
ಮೈಸೂರು ರಸ್ತೆಯಲ್ಲಿರುವ ಬಿಜಿಎಸ್ ಕಲ್ಯಾಣ ಮಂಟಪದೊಳಗೆ ಏಕಾಏಕಿ ಮಳೆ ನೀರು ನುಗ್ಗಿದ್ದರಿಂದ ಅಡುಗೆ ಮನೆಯಲ್ಲಿದ್ದ ತರಕಾರಿ ಸೇರಿದಂತೆ ಅಡುಗೆ ಸಾಮಾನುಗಳು ಹಾಳಾದವು. ನಿಂತ ಮಳೆಯ ನೀರಿನ ನಡುವೆಯೇ ಅಡುಗೆ ಭಟ್ಟರು ಅಡುಗೆ ಮಾಡಿದರು.