ಹಾಸನ: ವರುಣನ ಅಬ್ಬರಕ್ಕೆ ಬೇಲೂರು ನಲುಗಿದ್ದು, ಬೇಲೂರಿನ ಹೊರವಲಯದಲ್ಲಿರುವ ಯಗಚಿ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನತೆಯನ್ನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಬೇಲೂರಿನ ಯಗಚಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಮೂರು ದಿನಗಳಿಂದ ನಿರಂತರವಾಗಿ ಚಿಕ್ಕಮಗಳೂರು, ಮೂಡಿಗೆರೆ ಆಲ್ದೂರಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆ ಕಟ್ಟೆಗಳು, ಹಳ್ಳಕೊಳ್ಳಗಳು ತುಂಬಿ ಯಗಚಿ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಇನ್ನೇರಡು ದಿನದಲ್ಲಿ ನಾಲೆಯಿಂದ ನೀರು ಬಿಡುವ ಸಾಧ್ಯತೆಯಿದೆ.
3.6 ಟಿಎಂಸಿ ಸಾಮಾರ್ಥ್ಯವುಳ್ಳ ಯಗಚಿ ಜಲಾಶಯದಲ್ಲಿ ಸದ್ಯ 2.793ರಷ್ಟು ನೀರು ಶೇಖರಣೆಯಾಗಿದ್ದು, ಭರ್ತಿಯಾಗಲು ಇನ್ನರ್ಧ ಟಿಎಂಸಿ ನೀರು ಬೇಕಾಗಿದೆ. ಡ್ಯಾಂನ ಹಿತದೃಷ್ಟಿ ಯಿಂದ ಕಾಲುವೆಯ ಮೂಲಕ ನೀರನ್ನ ಹರಿಬಿಡಲಾಗಿದ್ದು, ಬೇಲೂರಿನ ವಿಷ್ಣು ಸಮುದ್ರ ಕೆರೆಗೆ ನೀರು ಹರಿಸಲಾಗಿದೆ.
ಜಲಾಶಯಕ್ಕೆ ಭೇಟಿ ನೀಡಿದ ಪುಪ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮಿಜೀ ಮತ್ತು ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್, ಡ್ಯಾಂ ಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮಾತನಾಡಿದ ಸ್ವಾಮೀಜಿ ಮತ್ತು ಶಾಸಕ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ದ್ವಾರಸಮುದ್ರ ಕೆರೆಗೆ ಹರಿದ ನೀರು ನಂತರ ರಣಘಟ್ಟ ಒಡ್ಡಿನಿಂದ ಹಳೇಬೀಡು, ಅಡಗೂರು, ಗೋಣಿಸೋಮನಹಳ್ಳಿ ಸುತ್ತಮುತ್ತಲಿನ ಹತ್ತಾರು ಕೆರೆಗೆ ನೀರು ಹರಿಯುವ ಯೋಜನೆಗೆ ಕುಮಾರಸ್ವಾಮಿ ಸರ್ಕಾರ 100ಕೋಟಿ ಹಣ ಬಿಡುಗಡೆ ಮಾಡಿದೆ. ಈಗಾಲಾದರೂ ಯೋಜನೆಯನ್ನ ಅನುಷ್ಠಾನಗೊಳಿಸಲಿ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.