ಹಾಸನ: ಲೋಕಸಭಾ ಚುನಾವಣೆಯ ನಂತರ ಈ ಸರ್ಕಾರ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಹಾಸನದ ಪ್ರವಾಸಿ ಮಂದಿರದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮಹಾರಾಷ್ಟ್ರದಲ್ಲಿ ಏನಾಯ್ತು ಗೊತ್ತಲ್ಲ?. ಅದೇ ರೀತಿ ಇಲ್ಲಿ ಯಾರು ಏನಾಗ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಾಮಾಣಿಕತೆ, ನಿಷ್ಠೆ ಎನ್ನುವುದೇ ಇಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕೋ ಮಾಡಿಕೊಂಡು ಹೋಗುತ್ತಾರೆ ಅಷ್ಟೇ ಎಂದರು.
ಇವತ್ತು ಇಲ್ಲಿರುತ್ತಾರೆ, ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗುತ್ತಾರೆ. ಇಂಥದ್ದು ರಾಜಕೀಯದಲ್ಲಿ ನಡೆದುಕೊಂಡು ಬಂದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರ್ಕಾರದಲ್ಲೂ ಕಮೀಷನ್ ಇದೆ ಎಂದಿದ್ದಾರೆ. ಅದನ್ನು ಯಾಕೆ ನಿಲ್ಲಿಸಲು ಆಗಿಲ್ಲ? ಎಂದರು.
135 ಸ್ಥಾನ ಗೆದ್ದಿದ್ದೇವೆ ಎಂದು ಹೇಳುತ್ತಿದ್ದೀರಿ, ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಪರಿಸ್ಥಿತಿ ಏನೆಂದು ಗೊತ್ತಾಗುತ್ತದೆ. ಎರಡನೇ ಬಾರಿ ಸಾಹಸ ಮಾಡಿ ಸಿಎಂ ಆಗಿದ್ದೀರಿ. ಸಮಾಜವನ್ನು ಎತ್ತಿ ಕಟ್ಟಿ ಏನು ಮಾಡುತ್ತೀರಾ?. ಮುಂದಿನ ದಿನಗಳಲ್ಲಿ ಎಲ್ಲವೂ ಬಹಿರಂಗವಾಗಲಿದೆ ಎಂದು ಗುಡುಗಿದರು.
ಜಾತಿ ಗಣತಿ ಯಾಕೆ ಬೇಕು?. ಆರ್ಥಿಕ, ಸಾಮಾಜಿಕ ಗಣತಿ ಮಾಡಿ. ಜಾತಿ ಗಣತಿ ಮಾಡಿ ವೈಷಮ್ಯ ಬಿತ್ತಲು ಹೋಗುತ್ತೀರಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿ, ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ರೂ. ಕೊಡಲು ನನ್ನ ವಿರೋಧ ಇಲ್ಲ. ಆದರೆ ಹಿಂದುಗಳೆಂದರೆ ಕೇವಲ ಮೇಲ್ವರ್ಗದ ಜನ ಮಾತ್ರ ಅಲ್ಲ. ದಲಿತರು, ಬಡವರು ಇದ್ದಾರೆ. ಅವರ ಪರಿಸ್ಥಿತಿಯನ್ನು ನೋಡಬೇಕಲ್ವಾ?. ಕೇವಲ ಮತಗಳನ್ನು ಓಲೈಸಿಕೊಳ್ಳಲು, ನೀವು ಹತ್ತು ಸಾವಿರ ಕೋಟಿ ಕೊಟ್ಟರೆ ಹೇಗೆ?. ಇದರಲ್ಲಿಯೂ ಲೂಟಿ ಹೊಡೆಯೋ ಯತ್ನ ಅಲ್ವೇ ಎಂದು ವಾಗ್ದಾಳಿ ನಡೆಸಿದರು.
ಸಿಎಂ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿರುವ ಬಗ್ಗೆಪ್ರತಿಕ್ರಿಯಿಸಿ, ಬರೀ ಹರಿಪ್ರಸಾದ್ ಅಲ್ಲ. ಇನ್ನೂ ಸಾಕಷ್ಟು ಜನ ಇದ್ದಾರೆ. ಒಂದೊಂದೇ ಧ್ವನಿ ಹೊರಬರುತ್ತದೆ. ಈ ಸಲವಾದರೂ ಬೆಳಗಾವಿ ಅಧಿವೇಶನದಲ್ಲಿ ಒಳ್ಳೆಯ ಚರ್ಚೆಯಾಗಲಿ ಎಂದು ಸುಮ್ಮನಿದ್ದೇನೆ. ನಾನೇನೂ ಹಿಂದೆ ಸರಿಯಲ್ಲ. ದಾಖಲೆ ಇಟ್ಟೇ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: ರಾಜಸ್ಥಾನ ಬಿಜೆಪಿಯಲ್ಲಿ ಭಿನ್ನಮತ ಸುಳ್ಳು; ಎಲ್ಲರೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ: ಪ್ರಹ್ಲಾದ್ ಜೋಶಿ