ಹಾಸನ : ಈ ಯಮ್ಮ ಮತ್ತು ಎಂಎಲ್ಸಿ ಹತ್ತಿರ ನಾನು ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಕಿಕೊಳ್ಳೋದನ್ನು ಹೇಳಿಸಿಕೊಳ್ಳಬೇಕಾ.? ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ಮತ್ತು ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಚ್. ಡಿ. ರೇವಣ್ಣ ಗುಡುಗಿದರು.
ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೇವಲ ಹಣ ಬಿಡುಗಡೆಯಾದಾಗ ಮಾತ್ರ ಸಭೆ ಕರೆಯುವ ಇವರುಗಳು ಇಷ್ಟು ದಿನ ಯಾಕೆ ಸಭೆ ಕರೆಯಲಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಭೆ ಕರೆಯದೇ ಕೊರೊನಾ ಸಭೆ ಕರೆದು ಅದ್ರಲ್ಲಿಯೇ ಎಲ್ಲವುದಕ್ಕೂ ಸಹಿ ಹಾಕಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಹಾಗಾಗಿ ಸಭೆಗೆ ಗೈರು ಹಾಜರಾಗಬೇಕಾಯಿತು ಎಂದರು.
ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ನಮ್ಮ ಪಕ್ಷದ ಬಗ್ಗೆ ತಿಳಿದುಕೊಂಡು ಮಾತನಾಡಬೇಕು. ಆರು ಕೋಟಿ ಬಂದಿದೆ ಎಂದು ಇಷ್ಟು ದಿನ ಯಾಕೆ ಮುಚ್ಚಿಟ್ಟಿದ್ದರು ಎಂದು ಪ್ರಶ್ನಿಸಿದರು.
ಈ ಯಮ್ಮನ ಭ್ರಷ್ಟಾಚಾರವನ್ನು ಸದ್ಯದಲ್ಲಿಯೇ ಬಯಲಿಗೆಳೆಯುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಹೆಸರು ಪ್ರಸ್ತಾಪಿಸದೇ ಗುಡುಗಿದರು.