ಹಾಸನ: ಇವತ್ತು ಕಾಂಗ್ರೆಸ್ ಪಕ್ಷ ಉಳಿದಿದೆ ಎಂದರೆ ಅದು ಸಿದ್ದರಾಮಯ್ಯ ಅವರು ಇರೋದ್ರಿಂದ ಅಷ್ಟೆ. ಅವರು ಇವತ್ತು ಕಾಂಗ್ರೆಸ್ ಬಿಟ್ಟರೆ ಪಕ್ಷ ಸರ್ವನಾಶ ಆಗುತ್ತೆ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಮಾಜಿ ಸಚಿವ ಎಚ್. ಡಿ ರೇವಣ್ಣ ಬ್ಯಾಟಿಂಗ್ ಮಾಡಿದರು. ಹಾಸನದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ಇರೋದ್ರಿಂದ ಕಾಂಗ್ರೆಸ್ ಉಳಿದಿದೆ. ಇವತ್ತು 70 ಪರ್ಸೆಂಟ್ ಕಾಂಗ್ರೆಸ್ ಬಂದಿದೆ ಎಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ ಎಂದರು.
ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದು ಕಾಂಗ್ರೆಸ್. ಅಂತಹ ಕೆಟ್ಟ ಕೆಲಸ ಮಾಡಿದ್ದಕ್ಕೆ ಇವತ್ತು ಕಾಂಗ್ರೆಸ್ ನಿರ್ನಾಮ ಆಗ್ತಾ ಇದೆ ಎಂದರು. ಇನ್ನು ರಾಮನಗರದಲ್ಲಿ ಡಿ.ಕೆ ಸುರೇಶ್ ಅವರನ್ನು ಎಂಪಿ ಮಾಡಲಿಲ್ಲ. ನಿಮ್ಮ ಸಹೋದರ ಅಧ್ಯಕ್ಷರಾಗಿದ್ದಾರೆ. ಗಂಭೀರವಾಗಿ ಪಕ್ಷ ಸಂಘಟನೆ ಮಾಡಿ. ಅದನ್ನ ಬಿಟ್ಟು ನಮ್ಮ ವಿರುದ್ಧ ಹೇಳಿಕೆ ನೀಡಿದರೆ ನಿಮ್ಮ ಬಗ್ಗೆ ನಾನು ಮಾತನಾಡಬೇಕಾಗುತ್ತದೆ ಎಂದು ಗುಡುಗಿದರು.
ಇನ್ನು ರಾಜ್ಯದಲ್ಲಿ ಬಿಜೆಪಿ ಬರಲು ಕಾಂಗ್ರೆಸ್ ಕಾರಣ. ಮೊದಲು ಜೆಡಿಎಸ್-ಬಿಜೆಪಿ ಎ ಟೀಮ್, ಬಿ ಟೀಮ್ ಎಂದರು. ಆಮೇಲೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡರು. ಕೋವಿಡ್ 19 ರ ಕಾಲದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಜನರ ದಿಕ್ಕು ತಪ್ಪಿಸುತ್ತಿವೆ. ಕಾಂಗ್ರೆಸ್ ಪೆಟ್ರೋಲ್ ಡಬ್ಬ ಹಿಡ್ಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಭಿಕ್ಷೆ ಹಾಕಿದ ಹಾಗೆ ಜನರಿಗೆ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದಾರೆ ಎಂದರು.
ಕೊರೊನಾ ಹೆಸರಲ್ಲಿ ಇಂದು ಕೆಲವು ಆಸ್ಪತ್ರೆಗಳು ರಕ್ತ ಹೀರುತ್ತಿವೆ. ಮೊದಲು ಅವುಗಳನ್ನು ಮಟ್ಟಹಾಕಿ ಎಂದು ಸಿಎಂಗೆ ಮನವಿ ಮಾಡಿದರು. 2023ಕ್ಕೆ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧವೇ ಹೋರಾಟ ಮಾಡಿ ಜೆಡಿಎಸ್ ಪಕ್ಷ ಏನೆಂಬುದನ್ನು ತೋರಿಸ್ತೀವಿ ಎಂದರು.