ಹಾಸನ : ಕೆಪಿಸಿಸಿ ಅಧ್ಯಕ್ಷ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಕುರಿತು ಲಘುವಾಗಿ ಮಾತನಾಡಿದರೆನ್ನಲಾದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಗರಂ ಆಗಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ನಾಯಕ ಬಂದಿರುವುದಾಗಿ ಕಾರ್ಯಕರ್ತರು ಪಕ್ಷ ಸಂಘಟಿಸಲು ಇಂತಹ ಸಮಾರಂಭ ಹಮ್ಮಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ, ಬಹಿರಂಗ ಭಾಷಣದಲ್ಲಿ ದಿನೇಶ್ ಗುಂಡೂರಾವ್ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.
ಯಾವುದೇ ಸರಿ-ತಪ್ಪುಗಳ ಬಗ್ಗೆ ಸಾರ್ವಜನಿಕವಾಗಿ ಬೇಕಾದ್ರೆ ಚರ್ಚೆಗೆ ಬರಲಿ. ಅಧಿಕಾರ ಬೇಕೆಂದು ನಾವು ಯಾರ ಮನೆ ಬಾಗಿಲಿಗೂ ಹೋಗಿ ಬೇಡಿಲ್ಲ. ಅಂತಹ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿ ಬಂದಂತಹ ದೇವೇಗೌಡರ ವಂಶ ನಮ್ಮದು ಎಂದರು.
ಒಂದು ವಿರೋಧ ಪಕ್ಷವಾಗಿ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪರನ್ನು ‘ಆಧುನಿಕ ಬಸವಣ್ಣ’ ಎಂದು ಹೊಗಳಿ ಅಟ್ಟಕ್ಕೇರಿಸಿದ ಕಾಂಗ್ರೆಸ್ ಪಕ್ಷದವರನ್ನು ಏನೆಂದು ಕರೆಯಬೇಕು? ಎಂದು ರೇವಣ್ಣ ವಾಗ್ದಾಳಿ ನಡೆಸಿದರು.