ಹಾಸನ: ನೋಡ್ರಿ ರಮೇಶ್ ಜಾರಕಿಹೊಳಿ ನಾಯಕ ಸಮಾಜದ ಪ್ರಮುಖ ಮುಖಂಡ. ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಅವರೇ ಆ ವಿಡಿಯೋವನ್ನ ನಕಲಿ ಎಂದು ಹೇಳಿದ್ದಾರೆ. ಹಾಗಾಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ ಅಷ್ಟೇ ಎಂದು ಮತ್ತೊಮ್ಮೆ ಜಾರಕಿಹೊಳಿ ಪರ ರೇವಣ್ಣ ಬ್ಯಾಟಿಂಗ್ ಮಾಡಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಗೆ ನಾವು ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಅದು ಸತ್ಯ. ಒಳ್ಳೆಯದು-ಕೆಟ್ಟದ್ದು ನಮಗೆ ಗೊತ್ತಿಲ್ಲ. ದೇವರಿಗೆ ಗೊತ್ತು. ಆದರೆ ವೈಯಕ್ತಿಕ ವಿಚಾರಗಳನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಒಬ್ಬ ಮನುಷ್ಯನಿಗೆ ನೋವಾದಾಗ ಆತನಿಗೆ ಧೈರ್ಯ ಹೇಳುವುದರಲ್ಲಿ ತಪ್ಪೇನು? ಯಾರದೇ ಇರಲಿ ವೈಯಕ್ತಿಕವಾಗಿ ಸಮಸ್ಯೆಯಾದಾಗ ಬೆಂಬಲಕ್ಕೆ ನಿಲ್ಲಬೇಕು. ಅವರಿಗೆ ಧೈರ್ಯವಾಗಿರುವಂತೆ ನಾವು ಹೇಳಿದ್ದೇವೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ರಮೇಶ್ ಜಾರಕಿಹೊಳಿ ಪರ ಸಿಡಿ ವಿಚಾರವಾಗಿ ಮಾತನಾಡಿದರು.
ಇನ್ನು ರಮೇಶ್ ಜಾರಕಿಹೊಳಿ ಸಣ್ಣ ಸಮಾಜದ ವ್ಯಕ್ತಿಯಾಗಿದ್ದರಿಂದ ಅವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ದೊಡ್ಡ ಸಮಾಜದ ವ್ಯಕ್ತಿಯಾಗಿದ್ದರೆ ಸುಮ್ಮನಾಗುತ್ತಿದ್ದರು ಎಂದು ಮತ್ತೊಮ್ಮೆ ರಮೇಶ್ ಪರ ಬ್ಯಾಟಿಂಗ್ ಮಾಡಿದರು.
ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಒಂದು ವರ್ಷವಾದರೂ ರಾಜ್ಯದ ಜನರಿಗೆ ಯಾವುದೇ ಅನುಕೂಲವಾಗುವಂತಹ ಕೆಲಸವನ್ನು ಈಗಿನ ಸರ್ಕಾರ ಮಾಡಿಲ್ಲ. ಅದರಲ್ಲೂ ಜೆಡಿಎಸ್ ಕ್ಷೇತ್ರಗಳನ್ನು ಕಡೆಗಣಿಸುತ್ತಾ ಬಂದಿದ್ದಾರೆ. ಒಂದೂವರೆ ವರ್ಷ ಯಾವ ಯಾವ ಜಿಲ್ಲೆಗೆ ಎಷ್ಟು ಕೊಟ್ಟಿದ್ದೀರಾ ಅಂತ ಸಿಎಂ ಅಧಿವೇಶನದಲ್ಲಿಯೇ ಹೇಳಲಿ ಅಥವಾ ಯಡಿಯೂರಪ್ಪ ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸಲಿ ಎಂದು ಖಾರವಾಗಿ ನುಡಿದರು.