ಹಾಸನ: ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು. ಪ್ರಾದೇಶಿಕ ಪಕ್ಷವನ್ನು ಮುಗಿಸುವುದೇ ಅವರ ಉದ್ದೇಶ. ಆದರೆ ಜನ ಮಾತ್ರ ನಮ್ಮ ಜೊತೆ ಇದ್ದಾರೆ, ಚುನಾವಣಾ ಫಲಿತಾಂಶ ಬರುವತನಕ ಕಾದು ನೋಡೋಣ ಅಂತಾ ಹೆಚ್ಡಿಕೆ ಮಾತಿಗೆ ಹೆಚ್ಡಿ ರೇವಣ್ಣ ದನಿಗೂಡಿಸಿದ್ದಾರೆ.
ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2 ರಾಷ್ಟ್ರೀಯ ಪಕ್ಷಗಳಿಗೂ ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಅಂದರೆ ಭಯ. ಹಾಗಾಗಿ ಏನಾದರೂ ಮಾಡಿ ನಮ್ಮ ಪಕ್ಷವನ್ನು ಮುಗಿಸಬೇಕೆಂದು ಶತ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ದ್ವೇಷ ರಾಜಕಾರಣ ಸರಿಯಲ್ಲ. ಶಿರಾದಲ್ಲಿ ಕೂಡ ಹೆಚ್ಚಿನ ಸಂಖ್ಯೆಯ ಜನರು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವರ ಆಶೀರ್ವಾದ ಮತ್ತು ಜನರ ಆಶೀರ್ವಾದ ಇರುವ ತನಕ ನಮ್ಮ ಪಕ್ಷವನ್ನು ಯಾರೂ ಕೂಡ ಏನೂ ಮಾಡಲಾಗದು ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ ರೇವಣ್ಣ.
ಈ ಹಿಂದೆ ನಮ್ಮ ಮೈತ್ರಿ ಸರ್ಕಾರವನ್ನು ಪರ್ಸೆಂಟೇಜ್ ಸರ್ಕಾರ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದ್ದರು. ಆದರೀಗ ಅವರ ಸರ್ಕಾರ ಏನೆಂಬುದನ್ನು ಪ್ರಧಾನಿ ಅವರು ಹೇಳಬೇಕು. ನಗರಾಭಿವೃದ್ಧಿ ಇಲಾಖೆ ಮತ್ತು ಚುನಾವಣಾ ಶಾಖೆಗಳು ರಾಜ್ಯದ ಜನರ ಏಳಿಗೆಗೆ ಗಮನ ಹರಿಸುತ್ತಿಲ್ಲ, ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು. ಹಾಸನ ಸರ್ಕಾರಿ ಕಚೇರಿಗಳು 24/7 ರೀತಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಕೆಲ ರಾಜಕೀಯ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ನೈತಿಕತೆ ಇಲ್ಲದ ಈ ಸರ್ಕಾರದಲ್ಲಿ ಭ್ರಷ್ಟಕೂಟವನ್ನು ರಚಿಸಿಕೊಂಡಿದ್ದಾರೆ, ಹೀಗಾಗಿ ರಾಜ್ಯ ಅದೋಗತಿಗೆ ಸಾಗಲಿದೆ. ಸಾಲ ಮಾಡಿಕೊಂಡು ಲೂಟಿಕೋರರ ಜೊತೆ ಸರ್ಕಾರ ಶಾಮೀಲಾಗಿ ರಾಜ್ಯವನ್ನು ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತೆಂಗು ಬೆಳೆ ನಾಶವಾದಾಗ ಯಾವ ಸರ್ಕಾರವೂ ಪರಿಹಾರ ಘೋಷಣೆ ಮಾಡಲಿಲ್ಲ. ಆಗಿನ ಕುಮಾರಸ್ವಾಮಿ ಸರ್ಕಾರ 165 ಕೋಟಿ ರೂ. ಕೊಟ್ಟಿದ್ದು, ಈಗಿನ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು. ಹಾಸನದ ವಾಣಿಜ್ಯ ಬೆಳೆ ಆಲೂಗೆಡ್ಡೆಗೂ ಪರಿಹಾರ ನೀಡಿಲ್ಲ. ಮೆಕ್ಕೆಜೋಳವನ್ನು ಸಹ ಮಾರಾಟ ಮಾಡಲಾಗದೇ ರಸ್ತೆಯಲ್ಲಿ ಹಾಕಿ ವ್ಯಾಪಾರಿಗಳಿಗೆ ಕಾಯುತ್ತಿದ್ದಾರೆ. ಬೆಂಬಲ ಬೆಲೆ ಇಲ್ಲದೇ ರೈತರು ಸಾವಿನ ದವಡೆಗೆ ಸಿಲುಕಿದ್ದಾರೆ. ರೈತರ ಸಂಕಷ್ಟವನ್ನು ನಾನು ಗಮನಿಸುತ್ತಿದ್ದೇನೆ. ಚುನಾವಣೆ ಬಳಿಕ ಬೃಹತ್ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.