ಹಾಸನ : ಗ್ರಾಮ ವಾಸ್ತವ್ಯದಿಂದ ಯಾವ ಪ್ರಯೋಜನವೂ ಆಗೋದಿಲ್ಲ ಅಂತಾ ಬಹಿರಂಗವಾಗಿಯೇ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದ ಬಗ್ಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನ ತಾಲೂಕಿನ ಹೆಚ್.ಆಲದಹಳ್ಳಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಕೆಲವರು ತಮ್ಮ ಜಮೀನು ವ್ಯಾಜ್ಯ ಇತ್ಯರ್ಥವಾಗದೇ, ಮಾರಾಟ ಮಾಡಲು ಆಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ಕುಟುಂಬಗಳನ್ನು ಗುರುತಿಸಿ ಈಗಲಾದ್ರು ದುರಸ್ತಿ ಮಾಡಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ರು.
ರೈತರಿಗೆ ಅನುಕೂಲವಾಗುವಂತಹ ಕೆಲ ಯೋಜನೆಯನ್ನು ಸರಳೀಕರಣ ಮಾಡಬೇಕು. ಪಹಣಿ, ವಿದ್ಯಾಭ್ಯಾಸ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ ಹೀಗೆ ಹಲವು ಅರ್ಜಿಗಳು ಬಂದ ತಕ್ಷಣ 24 ಗಂಟೆಯಲ್ಲಿ ಅವುಗಳ ವಿಲೇವಾರಿಯಾಗಬೇಕು. ತಹಶೀಲ್ದಾರ್, ಎಸಿ, ಡಿಸಿಯವರಿಗೆ ಕೆಲವು ಅಧಿಕಾರಿಗಳನ್ನು ನೀಡುವ ಮೂಲಕ ರೈತರಿಗೆ ಇನ್ನಾದ್ರೂ ಅನುಕೂಲ ಮಾಡಿಕೊಡಬೇಕು ಎಂದು ಕಂದಾಯ ಮಂತ್ರಿ ಆರ್.ಅಶೋಕ್ಗೆ ಮನವಿ ಮಾಡಿದ್ರು.
ಇನ್ನು ಖಾಸಗಿ ಶಾಲೆಗಳ ಹಿಡಿತದಲ್ಲಿ ಸರ್ಕಾರವಿದೆ. ಶಿಕ್ಷಣ ವ್ಯವಸ್ಥೆ ಬದಲಾಯಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆ ಮತ್ತಿತ್ತರ ಮೂಲವ್ಯವಸ್ಥೆಗಳು ಸಮರ್ಪಕವಾಗಿ ಕಲ್ಪಿಸಿದ ನಂತರ ಇಂತಹ ಗ್ರಾಮ ವಾಸ್ತವ್ಯ ಮಾಡುವುದು ಸೂಕ್ತ ಎನ್ನುವುದು ನನ್ನ ಭಾವನೆ ಎಂದರು.
ಇನ್ನು ತುಮಕೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂರವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾಂಗ್ರೆಸ್ನ ಆಂತರಿಕ ವಿಚಾರ. ಇಂದು ರಾಷ್ಟ್ರದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದೇ ಹಿಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ದೇವೇಗೌಡ್ರು. ಹಾಗಾಗಿ, ಅವರ ಮಾತಿಗೆ ನಾನು ಉತ್ತರ ನೀಡಲು ಆಗುವುದಿಲ್ಲ ಎಂದರು.
ನಾನು 4 ವರ್ಷಗಳ ಕಾಲ ಇಂಧನ ಮಂತ್ರಿಯಾಗಿದ್ದೆ. ನಾನು ಮಂತ್ರಿಯಾಗಿದ್ದ ವೇಳೆ ಇಂಧನ ಇಲಾಖೆಯನ್ನು ಯಾವ ರೀತಿ ಸುಭದ್ರವಾಗಿ ನಡೆಸಿದ್ದೆ ಎನ್ನುವುದನ್ನು ಕಾಲ ಬಂದಾಗ ಹೇಳುವೆ ಎಂದರು.
ಇಂದು ನಡೆದ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದ್ರೆ, ರಾಹುಕಾಲವಿದ್ದ ಕಾರಣ ರೇವಣ್ಣ ಮನೆಯಿಂದ ಹೊರಡದೇ ಇದ್ದ ಕಾರಣ ಕಾರ್ಯಕ್ರಮವನ್ನು ಸುಮಾರು 2.40 ನಿಮಿಷ ಮುಂದೂಡಲಾಗಿತ್ತು. ಇದರಿಂದ ಅಧಿಕಾರಿಗಳು ಮತ್ತು ನೆರೆದಿದ್ದ ಸ್ಥಳೀಯರು ಬಿಸಿಲಿನಲ್ಲಿಯೇ ಹೈರಾಣಾಗಿ ಹೋದ್ರು.