ಹಾಸನ : ರಾಜಕೀಯವಾಗಿ ನಮ್ಮನ್ನು ಮುಗಿಸಲು ಸಿಎಂ ಬಿಎಸ್‌ವೈ ಕೈಯಲ್ಲಿ ಆಗಲ್ಲಾ ಕಣ್ರೀ.. ಜನ್ರು ಮತ್ತು ದೇವರಿಂದ ಮಾತ್ರ ಸಾಧ್ಯ ಅಂತಾ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಯಡಿಯೂರಪ್ಪಗೆ ಮತ್ತೆ ಟಾಂಗ್ ನೀಡಿದರು.
ಹಾಸನದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ರು. ಆದರೆ, ಈಗ ಏನು ಮಾಡುತ್ತಿದ್ದಾರೆ. ಸಿಎಂ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಸಂಜೆ 6.30ರ ಮೇಲೆ ಸಿಎಂ ಏನೇನು ಮಾಡಿದ್ರು ಎಂಬುದು ಗೊತ್ತಿದೆ. ಕಚೇರಿ ಕೆಲಸ ಮುಗಿದ ಮೇಲೂ ಸಿಎಂ ಅವರು, ರೇವಣ್ಣನನ್ನು ತೆಗೆಯಲೇಬೇಕು ಎಂದು ರಾತ್ರಿ ವೇಳೆ ಎಲ್ಲಾ ಕಡತಗಳನ್ನೂ ತೆಗೆಸಿ ಏನು ಮಾಡಿದ್ದಾರೆ ಗೊತ್ತಿದೆ ಎಂದರು.
ರಾಜಕೀಯವಾಗಿ ನಮ್ಮನ್ನು ಮುಗಿಸಲು ಸಿಎಂ ಕೈಯಲ್ಲಿ ಆಗಲ್ಲಾ. ಜನ್ರು ಮತ್ತು ದೇವರಿಂದ ಮಾತ್ರ ನಮ್ಮನ್ನ ರಾಜಕೀಯವಾಗಿ ಮುಗಿಸಲು ಸಾಧ್ಯ. ಅವರ ಆಶೀರ್ವಾದ ನಮ್ಮ ಮೇಲೆ ಇರೋ ತನಕ ಏನೂ ಆಗಲ್ಲ. ರಾಜ್ಯದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ರಾತ್ರಿ 7.30ರ ಬಳಿಕ ನಮ್ಮ ಫೈಲ್ ತೆಗೆಸಿ ನೋಡಿರುವ ಸಿಎಂ ಇವರೊಬ್ಬರೇ ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ಇವತ್ತು ಕೆಎಂಎಫ್ ಚುನಾವಣೆ ಇದೆ ಬನ್ನಿ ಅಂತಾ ಬಾಲಚಂದ್ರ ಜಾರಕಿಹೊಳಿ ನನಗೆ ಮನವಿ ಮಾಡಿದರು. ಆದರೆ, ಸಿಎಂ ಮಾತ್ರ ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡ್ತಿದ್ದಾರೆ. ಹಾಲು ಉತ್ಪಾದಕರು ಚೆನ್ನಾಗಿರಬೇಕು ಎಂಬುದು ನಮ್ಮ ಆಶಯವಾಗಿತ್ತು. ಕೆಎಂಎಫ್ ಎಂಡಿಯನ್ನ ಸಿಎಂ ಕಚೇರಿಯಿಂದ ಫೋನ್ ಮಾಡಿ ಹೆದರಿಸಿದರು. ಮೀಟಿಂಗ್ ನಡೆಯುತ್ತಿದ್ದಾಗಲೇ ಎಂಡಿ ಎದ್ದು ಹೋದರು.
ಬಾಲಚಂದ್ರ ಜಾರಕಿಹೊಳಿ ನಾಯಕ ಸಮುದಾಯದವರು, ಅವರನ್ನ ಮಾಡಲಿ ಸಂತೋಷ. ನಾನು ಕೆಎಂಎಫ್ನಿಂದ ಟಿಎ ಡಿಎ ಏನನ್ನೂ ತೆಗೆದುಕೊಂಡಿಲ್ಲಾ. ದೇಶದಲ್ಲಿ ಇಷ್ಟರ ಮಟ್ಟಿಗೆ ಹಾಲು ಒಕ್ಕೂಟ ಬೆಳೆದಿದ್ರೆ ಅದಕ್ಕೆ ಕುರಿಯನ್ರವರ ಕಾರ್ಯವೇ ಸಾಕ್ಷಿ. ಡೈರಿ ಸೆಕ್ಟರ್ ಬೆಳೆಯಬೇಕಾದ್ರೆ ಡಾ.ಕುರಿಯನ್‌ರಂತೆ ದೇವೇಗೌಡರೂ ಕೆಲಸ ಮಾಡಿದ್ದಾರೆ. ಕರ್ನಾಟಕದ ಕುರಿಯನ್ ದೇವೇಗೌಡರು ಎಂದು ತಂದೆಯನ್ನು ರೇವಣ್ಣ ಹೊಗಳಿದರು.
ಚಿಕ್ಕಮಗಳೂರು ಹಾಲು ಒಕ್ಕೂಟ ಮಾಡಿಕೊಳ್ಳಲಿ. 10 ಲಕ್ಷ ಲೀಟರ್ ಹಾಲು ಹಾಸನದಿಂದ ಬರುತ್ತೆ. ಕೇವಲ1 ಲಕ್ಷ ಲೀಟರ್ ಹಾಲು ಮಾತ್ರ ಚಿಕ್ಕಮಗಳೂರಿನಿಂದ ಬರುತ್ತೆ ಅಷ್ಟೇ.. ಅವತ್ತು ನಾನು ಒಬ್ಬನೇ ಅರ್ಜಿ ಹಾಕಿದ್ದು. ಆದರೆ, ಕೋರ್ಟ್ ಏನು ಹೇಳಿತ್ತು ..? ಯಾರು ಅರ್ಜಿ ಹಾಕಿದ್ದಾರೆ ಅವರೇ ಅಭ್ಯರ್ಥಿ ಎಂದು ಹೇಳಿತ್ತು ಎಂದರು.