ಹಾಸನ: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ಎರಡೂವರೆ ವರ್ಷದಿಂದ ಚುನಾವಣೆ ಮಾಡದಿರುವುದು ಇತಿಹಾಸ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ನ್ಯಾಯಲಾದ ನೀಡಿದ ತೀರ್ಪು ಬಗ್ಗೆಯೂ ಸಂತಸ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ನಿಗದಿಯಾಗಿದ್ದ ಮೀಸಲಾತಿ ವಿರುದ್ಧ ಕೋರ್ಟ್ ಇಂದು ಆದೇಶ ನೀಡಿದ್ದು ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನ ಪ್ರಕಾರ ಇವರ ಮೀಸಲಾತಿ ಸರಿಯಿಲ್ಲ. ಹೀಗಾಗಿ ನ್ಯಾಯಾಲಯ ಇಂದು ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಕಾನೂನು ಹೋರಾಟಕ್ಕೆ ಸಿಕ್ಕ ಜಯ ಎಂದಿದ್ದಾರೆ.
ಶಾಸಕ ಶಿವಲಿಂಗೇಗೌಡ ಕೂಡ ಮಾತನಾಡಿ ಸರ್ಕಾರ ಕಾನೂನು ಬಾಹಿರವಾಗಿ ಕೆಲಸ ಮಾಡುವಾಗ ಇನ್ನಾದರೂ ಎಚ್ಚತ್ತುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ. ಅವರು ತಪ್ಪು ಮಾಡಿರುವುದಕ್ಕೆ ಈಗ ನಮಗೆ ಜಯ ಸಿಗುತ್ತಿದೆ. ನ್ಯಾಯಾಲಯ ನಮ್ಮನ್ನು ಕಡೆಗಣಿಸಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅರಸೀಕೆರೆ ಮತ್ತು ಹಾಸನ 2 ನಗರಸಭೆ ಅಧ್ಯಕ್ಷ ಹುದ್ದೆ ಎಸ್‌ಟಿಗೆ ಮೀಸಲಾಗಿತ್ತು. ಬಿಜೆಪಿ ಪಕ್ಷದಿಂದ ಮಾತ್ರ ಎಸ್‌ಟಿ ಅಭ್ಯರ್ಥಿ ಆಯ್ಕೆಯಾಗಿದ್ದರು. ಹೀಗಾಗಿ ಜೆಡಿಎಸ್ ಎರಡೂ ನಗರಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದರೂ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗುವಂತಾಗಿತ್ತು. ಇದರ ವಿರುದ್ಧ ಮಾಜಿ ಸಚಿವ ಹೆಚ್ಡಿ ರೇವಣ್ಣ, ಶಾಸಕ ಶಿವಲಿಂಗೇಗೌಡ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಇದೀಗ ಕೋರ್ಟ್ ಒಂದು ತಿಂಗಳೊಳಗೆ ಮತ್ತೆ ಚುನಾವಣೆ ಮಾಡಿ ಎಂದು ಹೇಳಿದೆ.