ಹಾಸನ : ಕಾರು ಚಾಲಕನಿಂದ ಆಸ್ತಿ ಬರೆಸಿಕೊಂಡ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ರಾಜಕೀಯವಾಗಿ ನಮ್ಮನ್ನು ಮುಗಿಸಬೇಕೆಂಬ ಹಿನ್ನೆಲೆಯಲ್ಲಿ ಈ ರೀತಿ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಇದೆ ಎಂದಿದ್ದಾರೆ.
ಬುಧವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆ ನಡೆದು ಎಷ್ಟು ತಿಂಗಳಾಗಿದೆ. ಈಗ ಏಕೆ ಆರೋಪ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಮೂರು ತಿಂಗಳು ಮಾತ್ರ ಬಾಕಿ ಇದೆ. ಇಂತಹ ಸಮಯದಲ್ಲಿ ಯಾಕೆ ಆರೋಪ ಮಾಡ್ತಿದ್ದಾರೆ. ಭವಾನಿ ಹೊಡೆದಿದ್ದರಿಂದ ಗರ್ಭಪಾತ ಆಗಿದೆ ಎಂಬ ಆರೋಪಕ್ಕೆ ಏನು ಹೇಳೋದು. ನನ್ನ ಪತ್ನಿ ಯಾರಿಗೆ ಸಹಾಯ ಮಾಡಿದ್ದಾರೆ ಅನ್ನೋದು ದೇವರಿಗೆ ಗೊತ್ತು. ಆ ಹುಡುಗಿಯನ್ನು ಮನೆಯಲ್ಲಿ ಇಟ್ಟುಕೊಂಡು ಡಿಗ್ರಿ ಮಾಡಿಸಿದ್ದು ನಾವು. ನಮ್ಮ ಮನೆಯಲ್ಲಿ ಆಕೆಯನ್ನು ಕೆಲಸಕ್ಕೆ ಇಟ್ಟುಕೊಂಡಿರಲಿಲ್ಲ, ಬಡವರ ಮನೆಯ ಹುಡುಗಿ ಅಂತ ನಮ್ಮ ಮನೆಯಲ್ಲಿಯೇ ಮಗಳಂತೆ ಬೆಳಸಿ, ಮದುವೆ ಮಾಡಿದೆವು ಎಂದರು.
ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುತ್ತಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಯಾವ್ಯಾವ ಇಲಾಖೆಗೆ ಪತ್ರ ಬರೆದಿದ್ದಾರೆ. ಪ್ರಜ್ವಲ್ ಆಗಿರುವುದಕ್ಕೆ ಎಲ್ಲವನ್ನು ತಡೆದಿದ್ದಾನೆ, ಬೇರೆಯವರಾಗಿದ್ದರೆ ಅದು ಬೇರೆ ಬೇರೆಯಾಗುತ್ತಿತ್ತು ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿಗರು ಬೇಕಾದಾಗ ಹೆಚ್ಡಿಕೆ ಮನೆ ಬಳಿ ಬರುತ್ತಾರೆ. ಅವರು ಅಧಿಕಾರಕ್ಕೆ ಬಂದಾಗ ನಮ್ಮನ್ನ ದೂರ ಇಡುತ್ತಾರೆ. ಅಂದೇ ಪ್ರಧಾನಿ ನರೇಂದ್ರ ಮೋದಿ ಅವರು ಕುಮಾರಸ್ವಾಮಿಗೆ ಕಾಂಗ್ರೆಸ್ ನಂಬಬೇಡಿ ಎಂದು ಹೇಳಿದ್ದರು. ಕಾಂಗ್ರೆಸ್ ಜೊತೆ ಮೈತ್ರಿ ಬಿಟ್ಟು ಬನ್ನಿ, ನಾವು ಬೆಂಬಲಿಸ್ತೇವೆ ಎಂದಿದ್ದರು. ಆದರೆ, ಆಗ ಸಮಯ ಕೂಡಿ ಬಂದಿರಲಿಲ್ಲ. ಈಗ ಬಂದಿದೆ. ಅದನ್ನು ಸಹಿಸದೇ ಈ ರೀತಿ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ಜೊತೆಗೆ ಹೋದ ಎಲ್ಲರಿಗೂ ಇದೇ ಪರಿಸ್ಥಿತಿ. ಮೋದಿ ಮತ್ತೆ ಪ್ರಧಾನಿ ಆಗಬೇಕು ಅನ್ನೋದು ನಮ್ಮ ಗುರಿ. ದೇವೇಗೌಡರು, ಕುಮಾರಸ್ವಾಮಿ ಎಲ್ಲರದ್ದೂ ಇದೇ ಗುರಿ. ನಮಗೆ ಬೇರೆ ಯಾವುದರ ಬಗ್ಗೆಯೂ ಚಿಂತೆ ಇಲ್ಲ ಎಂದರು.
ಕೊರೊನಾ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಜಿಲ್ಲಾ ಸರ್ಜನ್, ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಕಾಮಗಾರಿ ಮುಗಿದಿದೆ. ಹೊಸ ಆಸ್ಪತ್ರೆ ಉದ್ಘಾಟನೆ ಮಾಡಬೇಕು. ಇಲ್ಲದಿದ್ದರೆ ಶಾಸಕರ ಜೊತೆ ತೆರಳಿ ನಾವೇ ಟೇಪ್ ಕಟ್ ಮಾಡುತ್ತೇವೆ ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಇದನ್ನೂ ಓದಿ : ಭವಾನಿ ಸಿಟ್ಟಿನಿಂದ ಮಾತನಾಡಿದ್ದಾರೆ, ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ: ಹೆಚ್ ಡಿ ರೇವಣ್ಣ