ಹಾಸನ: ದುಷ್ಟ ಶಕ್ತಿಗಳನ್ನು ಎದುರಿಸಬೇಕಲ್ಲ ಅದಕ್ಕಾಗಿಯೇ ನಿಂಬೆಹಣ್ಣು ಇಟ್ಟುಕೊಂಡಿದ್ದೇನೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ತಿರುಗೇಟು ನೀಡಿದರು.
ನಿಂಬೆಹಣ್ಣು ಇಡ್ಕೊಂಡು ಓಡಾಡುವವರ ಆಟ ಇನ್ನು ಮುಂದೆ ಹೆಚ್ಚು ದಿನ ನಡೆಯುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪರೋಕ್ಷವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣನಿಗೆ ಟಾಂಗ್ ನೀಡಿದ್ದರು. ಈಗ ರೇವಣ್ಣ ಅವರು ಪ್ರತ್ಯುತ್ತರ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ವೈರಿಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಂಡಿದ್ದೇನೆ. ಮಾಟ-ಮಂತ್ರ ಮಾಡುತ್ತಾರಲ್ಲ ಅವರನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕಲ್ಲವಾ. ಅದಕ್ಕಾಗಿಯೇ ಯಾವಗಲೂ ನಿಂಬೆ ಹಣ್ಣು ಹಿಡಿದಿರುತ್ತೇನೆ ಎಂದರು.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸಹ ನಿಂಬೆಹಣ್ಣು ಇಟ್ಟುಕೊಂಡಿದ್ದಾರೆ. ನಾನು ನಿಂಬೆಹಣ್ಣು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಮತ್ತೆ ಪುನರುಚ್ಚರಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳಿಗೆ ಪಿಡಿಒಗಳು 10ರಿಂದ 20 ಸಾವಿರ ಹಣ ನೀಡುವಂತೆ ಬಿಜೆಪಿ ನಾಯಕರು ಸೂಚಿಸಿದ್ದಾರೆ ಎಂದು ಆರೋಪಿಸಿದರು.