ಹಾಸನ: ಹಾಸ್ಟೆಲ್ಗಳಲ್ಲಿ ಬಡ ಮಕ್ಕಳಿಗೆ ಊಟ ಕೊಡುವುದರಲ್ಲೂ ರಾಜ್ಯದಲ್ಲಿ ಲೂಟಿ ನಡೆಯುತ್ತಿದ್ದು, ಪ್ರತಿ ವರ್ಷ ಟೆಂಡರ್ ಕರೆಯಬೇಕು ಮತ್ತು ಸಮಗ್ರ ತನಿಖೆ ಮಾಡುವಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸರ್ಕಾರವನ್ನು ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ 116 ಹಾಸ್ಟೆಲ್ಗಳಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ 106 ಹಾಸ್ಟೆಲ್ ಇವೆ. ಬಡವರ ಮಕ್ಕಳಿಗೆ ಊಟ ನೀಡಲು ಆಹಾರ ಸಾಮಗ್ರಿಗೆ ಎರಡು ಇಲಾಖೆಗಳು ತಲಾ 13 ಕೋಟಿಯಂತೆ ಟೆಂಡರ್ ಕರೆದು, ಜೊತೆಗೆ ವೇತನಕ್ಕಾಗಿ ಮತ್ತೆ ತಲಾ 6 ಕೋಟಿ ಅಂತ ಹೇಳಿ ಸುಮಾರು 38 ಕೋಟಿ ರೂ. ಖರ್ಚು ಮಾಡುತ್ತೇವೆಂದು ಸುಳ್ಳು ಲೆಕ್ಕ ಕೊಟ್ಟು ಹಣ ದೋಚುತ್ತಿದ್ದಾರೆ ಎಂದು ಆರೋಪಿಸಿದ್ರು. ಇದನ್ನು ಸೋಮವಾರ ನಡೆಯುವ ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡುತ್ತೇನೆ ಎಂದರು.
ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ಮುಳುಗುವ ಹಡಗಿನ ಸಹವಾಸಕ್ಕೆ ಏಕೆ ಬರುತ್ತೀರಿ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಲೇವಡಿ ಮಾಡಿದರು.
ನಾಳೆ ಬೊಮ್ಮಾಯಿಯವರ ಸೀಟಿಗೆ ಕುತ್ತು ಬರುವುದು ಬೇಡ. ನೀವು ಮುಳುಗುವ ಹಡಗಿನ ಜೊತೆ ಯಾಕೆ ಬರ್ತೀರಾ? ನೀವು ಮುಳುಗುವ ಹಡಗಿನ ಜೊತೆ ಸೇರಿ ನಿಮ್ಮ ಸ್ಥಾನಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ಸಲಹೆ ನೀಡಿದ್ರು.