ಹಾಸನ: 45 ದಿನಗಳ ಕಾಲ ಅಸಂಘಟಿತ ಕಾರ್ಮಿಕರನ್ನು ಸರ್ಕಾರ ಕತ್ತಲೆ ಕೋಣೆಯಲ್ಲಿ ಇಟ್ಟಿದೆ. ಅವರನ್ನು ಬಡಿದೆಬ್ಬಿಸಲು 45 ದಿನಗಳ ಬೇಕಾಯಿತು ಎಂದು ಸರ್ಕಾರವನ್ನು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಟೀಕಿಸಿದರು.
ಜಿಲ್ಲೆಯಲ್ಲಿ ಮುಂದಿನ ವಾರದಿಂದ ಆಲೂಗೆಡ್ಡೆ ಬಿತ್ತನೆ ಕಾರ್ಯ ಮಾಡಬೇಕಿದೆ. ಆದರೆ ಜಿಲ್ಲಾಡಳಿತ ಮಾತ್ರ ಎಲ್ಲೋ ಒಂದು ಕಡೆ ವರ್ತಕರೊಂದಿಗೆ ಶಾಮೀಲಾಗಿದೆ ಎಂದು ಅನಿಸುತ್ತಿದೆ. ಬೆಲೆ ನಿಗದಿ ಮಾಡಬೇಕಾಗಿರುವುದು ಜಿಲ್ಲಾಡಳಿತವೋ ಅಥವಾ ಆಲೂಗಡ್ಡೆ ವರ್ತಕರು ಜಿಲ್ಲಾಧಿಕಾರಿಗಳು ಇದರ ಬಗ್ಗೆ ವಿಷಯ ತಿಳಿದುಕೊಳ್ಳಬೇಕು. ಹಿಂದೆ ಇದ್ದ ಜಿಲ್ಲಾಧಿಕಾರಿಗಳು ಬೆಲೆ ನಿಗದಿ ಮಾಡಿ ಬಿತ್ತನೆ ಬೀಜವನ್ನು ಪ್ರಮಾಣೀಕರಿಸಿ ರೈತರಿಗೆ ನೀಡುವಂತಹ ಕೆಲಸ ಮಾಡುತ್ತಿದ್ದರು. ಆದರೆ ಈ ಜಿಲ್ಲಾಧಿಕಾರಿಗಳಿಗೆ ಆಲೂಗಡ್ಡೆಯ ವಿಷಯವೇ ಗೊತ್ತಿಲ್ಲ. ಗೊತ್ತಿಲ್ಲದಿದ್ದರೆ ಶಾಸಕರುಗಳನ್ನು ಸಭೆ ಕರೆದು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಇನ್ನು ಎಪಿಎಂಸಿ ವರ್ತಕರು ದಲ್ಲಾಳಿಗಳ ಜೊತೆ ಶಾಮೀಲಾಗಿ ಕೃಷಿಕರನ್ನು ಕಡೆಗಣಿಸಿದ್ದಾರೆ. ಎಪಿಎಂಸಿಯವರು ಕೃಷಿಕರಿಗೆ ಯಾವುದೇ ಸಹಾಯವನ್ನು ಇದುವರೆಗೂ ಮಾಡಿಲ್ಲ. ವರ್ತಕರು ರೈತರ ಬಗ್ಗೆ ಕಾಳಜಿ ತೋರಬೇಕು ಎಂದು ಮನವಿ ಮಾಡಿದ ಅವರು ಕೆಲವು ರೈತರು ತಿನ್ನುವ ಆಲೂಗೆಡ್ಡೆಯನ್ನು ಬಿತ್ತನೆ ಆಲೂಗಡ್ಡೆ ಎಂದು ಖರೀದಿಸುತ್ತಿದ್ದಾರೆ. ದಯಮಾಡಿ ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸಬೇಕು ಎಂದರು.
ದಯಮಾಡಿ ಬಿತ್ತನೆ ಬೀಜ, ಅದಕ್ಕೆ ಗೊಬ್ಬರ ಹಾಗೂ ಕೀಟನಾಶಕಗಳನ್ನು ಸರ್ಕಾರ ಪ್ರಮಾಣೀಕರಿಸಬೇಕು. ಜೊತೆಗೆ ಪ್ರತಿ ಖರೀದಿಗೂ ಬಿಲ್ ನೀಡುವಂತೆ ಆದೇಶ ಮಾಡಬೇಕು. ರಾಜ್ಯದ ಮುಖ್ಯಮಂತ್ರಿಗಳು ಓಟ್ ಬ್ಯಾಂಕ್ ರಾಜಕೀಯ ಮಾಡದೇ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣಬೇಕು. ಕೇವಲ ಅವರ ಪಕ್ಷದ ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡುವುದಲ್ಲ ಎಂದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಗಳು ಇದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಅವರ ಆದೇಶಕ್ಕೆ ಬೆಲೆ ಇಲ್ಲದಂತೆ ಆಗಿದೆ. ಮುಖ್ಯಮಂತ್ರಿಗಳು ಕಾಮಗಾರಿಗಳನ್ನು ಪ್ರಾರಂಭಿಸಬಹುದು ಎಂದು ಆದೇಶ ಮಾಡಿದರೆ ಅದನ್ನು ಮೂರು ದಿನ ಬಿಟ್ಟು ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಬಾರದು ಎಂದು ಆದೇಶ ಹೊರಡಿಸುತ್ತಾರೆ. ಸರ್ಕಾರ ಯಾರ ಕೈಕೆಳಗಡೆ ಇದೆ. ಮುಖ್ಯಮಂತ್ರಿಗಳ ಪತ್ರಕ್ಕಾದರೂ ಬೆಲೆ ಬೇಡವೇ? ಮುಖ್ಯಮಂತ್ರಿಗಳ ಹಿಡಿತದಲ್ಲಿ ಅಧಿಕಾರಿಗಳು ಇದ್ದಾರೆಯೇ? ಅಥವಾ ಅಧಿಕಾರಿಗಳ ಹಿಡಿತದಲ್ಲಿ ಮುಖ್ಯಮಂತ್ರಿಗಳು ಇದ್ದಾರೆಯೇ.? ಎಂಬ ಪ್ರಶ್ನೆ ಮಾಡಬೇಕಾದ ಸಂದರ್ಭ ಎದುರಾಗಿದೆ ಎಂದು ಟೀಕಿಸಿದರು.
ಇನ್ನು ರಾಜ್ಯದ ಸುಮಾರು ಶೇ.75ರಷ್ಟು ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಜಿಲ್ಲಾಧಿಕಾರಿಗಳ ಖಾತೆಗೆ ಐದರಿಂದ ಹತ್ತು ಕೋಟಿ ಹಣ ವರ್ಗಾವಣೆ ಮಾಡುವ ಮೂಲಕ ಪ್ರತಿ ಜಿಲ್ಲೆಯಲ್ಲಿರುವ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಲು ಸಹಕರಿಸಬೇಕು ಎಂದು ಒತ್ತಾಯ ಮಾಡಿದರು.
ಜಿಲ್ಲಾಡಳಿತ ಮಾತ್ ಎತ್ತಿದ್ರೆ ಸಾಕು ಕೊರೊನಾ ಅಂತ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಗಂಭೀರತೆ ಇಲ್ಲ ಕೆಲವು ವಿಷಯವು ಅವರಿಗೆ ತಿಳಿದಿಲ್ಲ ಮೊದಲು ಅವರು ಜಿಲ್ಲೆಯ ಕೃಷಿಕರ ಹಾಗೂ ರೈತರ ಸಂಕಷ್ಟಗಳ ಬಗ್ಗೆ ತಿಳಿದುಕೊಳ್ಳಲಿ ಎಂದ ಅವರು, ಎರಡು ತಿಂಗಳು ಕತ್ತಲೆ ಕೋಣೆಯಲ್ಲಿ ಅಸಂಘಟಿತ ಕಾರ್ಮಿಕರನ್ನು ಇಟ್ಟು ಅವರು ವಾಸಮಾಡುವ ಮನೆಯ ಮಾಲೀಕರು ಈಗ ಖಾಲಿ ಮಾಡಿಸಲು ಮುಂದಾಗಿದ್ದಾರೆ ಇದು ಸಿಎಂಗೆ ಗೊತ್ತಾಗುವುದಿಲ್ಲ, ಯಾಕೆಂದರೆ ಅವರು ಸರ್ಕಾರಿ ಬಂಗಲೆಯಲ್ಲಿದ್ದಾರೆ. ದಯಮಾಡಿ ಮನೆ ಖಾಲಿ ಮಾಡಿಸುವ ಮಾಲೀಕರುಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.