ಅರಸೀಕೆರೆ: "ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ದೊಡ್ಡದು ಅಂತ ಹೇಳ್ತೀರಲ್ಲ. ಇದನ್ನು ಮುಂಚಿತವಾಗಿಯೇ ಹೇಳಿ ಪಕ್ಷ ಬಿಡಬೇಕಾಗಿತ್ತು" ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಮಂಗಳವಾರ ನಡೆದ 82ನೇ ದಿನದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜೆಡಿಎಸ್ ಪಕ್ಷದ ಬಂಡವಾಳವನ್ನು ಬಿಚ್ಚಿಡುತ್ತೇನೆ ಎಂದು ಶಿವಲಿಂಗೇಗೌಡರು ಹೇಳುತ್ತಾರೆ. ನಿಮ್ಮ ಬಂಡವಾಳವನ್ನು ನಾವು ಬಿಚ್ಚಿಡ್ತೀವಿ. ಕಾಂಗ್ರೆಸ್ ಪಕ್ಷವನ್ನು ಹೊಗಳುವ ನೀವು, ಮರ್ಯಾದೆ ಇದ್ದಿದ್ರೆ ಅವತ್ತೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ನಿಮ್ಮಂತಹ ವಂಚಕ ಶಾಸಕರನ್ನು ಜನರು ಈ ಬಾರಿ ಮನೆಗೆ ಕಳಿಸುತ್ತಾರೆ" ಎಂದು ಬಹಿರಂಗಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
"ನನ್ನ ಹೆಂಡತಿ ಹಳೆಯ ಕಾರಲ್ಲಿ ಜಮೀನಿಗೆ ಹೋಗ್ತಾಳೆ. ಅವಳು ದುಡಿದು ನನ್ನನ್ನು ಸಾಕ್ತಿದ್ದಾಳೆ ಅಂತ ಹೇಳುವ ನೀವು ನಿಮ್ಮ ಹೆಂಡತಿ ಹೆಸರಲ್ಲಿ ಏನೇನು ಅಕ್ರಮ ಮಾಡಿದ್ದೀರಿ ಎಂಬುದು ಎಲ್ಲವನ್ನೂ ಸಮಯ ಬಂದಾಗ ಹೇಳುತ್ತೇವೆ. ಇವತ್ತು ಅರಸೀಕೆರೆಯಲ್ಲಿ 15 ವರ್ಷ ನಿಮ್ಮನ್ನು ಮತ ಕೊಟ್ಟು ಬೆಳೆಸಿದ್ರಲ್ಲ ಅವರನ್ನು ಧಿಕ್ಕರಿಸಿ ಹೋಗುವ ನಿಮಗೆ ಎಲ್ಲೂ ನೆಲೆ ಸಿಗಲ್ಲ. ಅವತ್ತು ತೆಂಗಿನ ಮರಕ್ಕೆ ನುಸಿ ಪೀಡೆ ರೋಗ ಬಂದಿದೆ, ಪರಿಹಾರ ಬೇಕು ಅಂತ ನಾಟಕವಾಡುವ ಮೂಲಕ ಪ್ರತಿಭಟನೆ ಮಾಡಿದ್ರಿ. ಆಗ ದುಡ್ಡು ಕೊಟ್ಟಿದ್ದು ಯಾರು? ಬಿಜೆಪಿ ನಿಮ್ಮನ್ನು ರಾಗಿ ಕಳ್ಳ ಅಂತ ಹೇಳಿದಾಗ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ್ರಲ್ಲ, ಹಾಗೇ ಜೆಡಿಎಸ್ ಪಕ್ಷದಿಂದ ಯಾವುದೇ ಕೆಲಸ ಮಾಡಿಸಿಕೊಂಡಿಲ್ಲ ಅಂತ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿ. ಎಲ್ಲಾ ಸಮಾಜಕ್ಕೂ ನೀವು ಇವತ್ತು ಮೋಸ ಮಾಡ್ತಿದ್ದೀರಿ. ಈ ಬಾರಿ ನಿಮ್ಮನ್ನು ಜನರೇ ಮನೆಗೆ ಕಳಿಸುತ್ತಾರೆ ನೋಡ್ತಿರಿ" ಎಂದು ಶಾಸಕರ ಹೆಸರು ಪ್ರಸ್ತಾಪಿಸದೇ ಟೀಕಾಸಮರ ನಡೆಸಿದರು.
ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, "ನಿಮ್ಮ ಹಿಂದೆ ಜನರು ಬರಬೇಕು ಅಂತ ಅವರಿಗೆ ದುಡ್ಡು ಕೊಟ್ರಿ, ಅವರು ನಿಮ್ಮನ್ನು ಬಿಡುತ್ತಾರೆಯೇ ಹೊರತು ಪಕ್ಷ ಬಿಡಲ್ಲ. ಅವತ್ತು ನಿಮ್ಮ ಪ್ರತಿಭಟನೆಗೆ ಬಿಜೆಪಿ ನಾಯಕರು ಆಗಲಿ ಅಥವಾ ಕಾಂಗ್ರೆಸ್ ನಾಯಕರಾಗಲಿ ಬಂದು ಸಹಾಯ ಮಾಡಲಿಲ್ಲ. ನಿಮ್ಮ ಹೋರಾಟಕ್ಕೆ ಸ್ಪಂದಿಸಿದ್ದು ಇದೇ ಕುಮಾರಸ್ವಾಮಿ. ಅರಸೀಕೆರೆಗೆ ಕಾಂಕ್ರೀಟ್ ರಸ್ತೆ, ವಿದ್ಯುತ್ ಸ್ಟೇಷನ್, ಹಾಲಿನ ಶೀತಲೀಕರಣ ಕೇಂದ್ರ, ನೀವು ಹೋರಾಟ ಮಾಡಿದಾಗ ತೆಂಗಿನ ಮರಕ್ಕೆ ಕೋಟಿ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು ಇದೀ ಕುಮಾರಸ್ವಾಮಿ. ಜೆಡಿಎಸ್ ಕೊಡುಗೆ ಸಾಕಷ್ಟಿದೆ, ಅದನ್ನು ಮರೆತು ನೀವು ನಮ್ಮ ಬಂಡವಾಳ ಬಯಲು ಮಾಡುತ್ತೇನೆ ಅಂತೀರಲ್ಲ ಯಾರ ಬಂಡವಾಳ ಚುನಾವಣೆಯಲ್ಲಿ ಬಯಲಾಗುತ್ತದೆ ಕಾದು ನೋಡಿ" ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಈಶ್ವರಪ್ಪ ಮಾನಸಿಕ ಅಸ್ವಸ್ಥತೆಯಿಂದ ಮಾತನಾಡುತ್ತಿದ್ದಾರೆ: ಯುಟಿ ಖಾದರ್ ವಾಗ್ದಾಳಿ