ಹಾಸನ: ಶಿವರಾತ್ರಿಯಂದು ಜಾಗರಣೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು ಮುಂಜಾನೆ ತಮ್ಮ ಮನೆದೇವರಾದ ಹುಚ್ಚೂರು ಹರದನಹಳ್ಳಿಯ ಈಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ದೊಡ್ಡಗೌಡರ ಪುತ್ರ. ಸಚಿವ ಎಚ್.ಡಿ. ರೇವಣ್ಣ, ಮೊಮ್ಮಗ ಸೂರಜ್ ಹಾಗೂ ರೇವಣ್ಣನ ಸೊಸೆ ಈ ವೇಳೆ ಉಪಸ್ಥಿತರಿದ್ದರು.
ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ದೇವೇಗೌಡ್ರು, ನಾನು, ನನ್ನ ಮಕ್ಕಳೆಲ್ಲಾ ಹುಟ್ಟಿದ್ದು ರೈತ ಕುಟುಂಬದಲ್ಲಿ. ನಮ್ಮದು ರಾಜರ ವಂಶವಲ್ಲ. ಇಷ್ಟು ವರ್ಷಗಳು ಕಳೆದರೂ ನಾನು ಯಾವ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಪುನರಪಿ ಜನನಂ ಪುನರಪಿ ಮರಣಂ ಎಂದು ಹೇಳಿದರು. ನಾನು ಬಾಲ್ಯದಲ್ಲಿ ತಂದೆ ಹಾಗೂ ತಾತನೊಂದಿಗೆ ದೇಗುಲಕ್ಕೆ ಬರುತ್ತಿದೆ. ಅಂದಿನ ವಿದ್ಯಮಾನವೇ ಬೇರೆಯಾಗಿತ್ತು. ಇಂದು ಸ್ವಲ್ಪ ಬದಲಾಗಿದೆ ಎಂದು ತಮ್ಮ ಬಾಲ್ಯದ ನೆನಪನ್ನು ಬಿಚ್ಚಿಟ್ಟರು.
ನಾನು ಜೀವನದಲ್ಲಿ ಏನನ್ನಾದರೂ ಪಡೆದಿದ್ದೇನೆ ಎಂದರೆ ಅದೆಲ್ಲ ಕೊಟ್ಟಿದ್ದು ಈಶ್ವರ. ಸಾಮಾನ್ಯ ರೈತ ಮಗನಾಗಿ ಇಂದು ನಾವು ಎಲ್ಲವನ್ನೂ ಗಳಿಸಿದ್ದೇವೆ ಎಂದರೆ ಆತನ ಶಕ್ತಿಯಿಂದಲೇ. ಶಿವನ ಮೇಲೆ ನಮ್ಮ ಕುಟುಂಬ ಸಂಪೂರ್ಣ ನಂಬಿಕೆಯಿಟ್ಟಿದೆ ಎಂದರು.
ನನ್ನ ಮಗ ಮುಖ್ಯಮಂತ್ರಿಯಾಗಲು, ಮತ್ತೊಬ್ಬ ಮಗ ಜಿಲ್ಲಾ ಉಸ್ತುವಾರಿ ಸಚಿವನಾಗಲು ಈ ದೈವ ಕೃಪೆ ಕಾರಣ. ಇನ್ಮುಂದೆಯೂ ದೇಶದಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡುತ್ತೇವೆಯಷ್ಟೇ. ಈಶ್ವರ ತೋರುವ ಮಾರ್ಗದಲ್ಲಿ ನಾವು ನಡೆದುಕೊಳ್ಳುತ್ತೇವೆ ಎಂದರು.