ಹಾಸನ: ನಾವು ಹೆಲ್ಮೆಟ್ ಹಾಕದಿದ್ರೆ ಸಾವಿರಾರು ರೂ.ದಂಡ ಹಾಕ್ತೀರಾ. ನಿಮ್ಮ ಇಲಾಖೆಯವರೇ ಹೆಲ್ಮೆಟ್ ಹಾಕೋದಿಲ್ಲವಲ್ಲ ಸಾರ್, ಅವರಿಗ್ಯಾಕೆ ದಂಡ ಹಾಕಲ್ಲ ಅಂತ ಎಸ್ಪಿಯವರಿಗೆ ಕೆಲವರು ಟ್ವಿಟ್ ಮಾಡಿದ್ದಾರೆ. ಇದಕ್ಕೆ ಎಸ್ಪಿ ಹರಿರಾಂ ಶಂಕರ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡಬೇಕು ಇಲ್ಲವಾದಲ್ಲಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲ ಪೊಲೀಸರು ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದಾಗಿ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಾಸನ ಎಸ್ಪಿ ಎಚ್ಚರಿಕೆ ನೀಡಿದ್ದಾರೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು ಕಂಡುಬಂದಲ್ಲಿ ಸಂಚಾರಿ ನಿಯಮದ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗುವುದು ಎಂದರು.
ಇನ್ನು ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಮೂಲಾಗ್ರ ಬದಲಾವಣೆ ಮಾಡಲಾಗುತ್ತಿದ್ದು ಟ್ರಾಫಿಕ್ ಸಿಗ್ನಲ್ ನಡುವಳಿಕೆ ಹಾಗೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಕಾಂಟ್ಯಾಕ್ಟ್ ಲೆಸ್ ಟ್ರಾಫಿಕ್ ಚಲನ್ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.
ಹಾಸನ ನಗರದ ಪಾಯಣ್ಣ ಸರ್ಕಲ್, ಸುಬೇದಾರ್ ಸರ್ಕಲ್ ಮತ್ತು ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿ ಕಾಂಟ್ಯಾಕ್ಟ್ ಲೆಸ್ ಚಲನ್ ನೀಡುವ ಹೊಸ ನಿಯಮವನ್ನು ಜಾರಿ ಮಾಡಲಾಗುತ್ತಿದ್ದು ಇದರಿಂದ ಗ್ರಾಹಕರಿಗೆ ಪಾರದರ್ಶಕ ಬಿಲ್ಲಿಂಗ್ ವ್ಯವಸ್ಥೆ ಜಾರಿ ಮಾಡಿದಂತಾಗುತ್ತದೆ ಎಂದರು.
ಇನ್ನು ನಗರದಲ್ಲಿ ಬೇಕಾಬಿಟ್ಟಿಯಾಗಿ ಆಟೋ ಬಾಡಿಗೆ ವಸೂಲಿ ಮಾಡುತ್ತಿರುವ ದೂರು ವ್ಯಾಪಕವಾಗಿ ಕೇಳಿ ಬಂದಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಲು ನಗರದ ಹೊಸ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ ಸಮೀಪ ಪ್ರಿಪೇಡ್ ಆಟೋ ನಿಲ್ದಾಣವನ್ನು ತೆರೆಯುವ ಕುರಿತು ಸಾರ್ವಜನಿಕರು, ಆಟೋ ಮಾಲೀಕರು ಹಾಗೂ ಚಾಲಕರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: ವಾಹನ ಸವಾರರ ಮೇಲೆ ಹೊಸ ಅಸ್ತ್ರ: ತಂತ್ರಜ್ಞಾನ ಬಳಸಿ ಸಂಚಾರಿ ನಿಯಮ ಉಲ್ಲಂಘನೆಗೆ ಕ್ರಮ