ಹಾಸನ: ಕೆಲಸ ಕೊಡಿಸುವುದಾಗಿ ನಂಬಿಸಿ ವಿವಿಧ ಜನರಿಂದ ಕೋಟ್ಯಂತರ ಹಣವನ್ನು ಪಡೆದುಕೊಂಡು ವಂಚಿಸಿದ್ದ ತಮಿಳುನಾಡು ಮೂಲದ ಮಾಜಿ ಸಚಿವನನ್ನು ಹಾಸನ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಬಾಲಾಜಿ ರಾಜೇಂದ್ರನ್ ಬಂಧನಕೊಳಗಾದ ತಮಿಳುನಾಡಿನ ಎಡಿಎಂಕೆ ಪಕ್ಷದ ಮಾಜಿ ಸಚಿವ. ಎಡಿಎಂಕೆ ಪಕ್ಷದಲ್ಲಿ ಮಂತ್ರಿಯಾಗಿದ್ದ ಬಾಲಾಜಿ ರಾಜೇಂದ್ರ ತಮಿಳುನಾಡಿನಲ್ಲಿ ಹಲವರಿಗೆ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಮಾಜಿ ಸಚಿವನನ್ನ ತಮಿಳುನಾಡಿನ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಹುಡುಕಾಟ ನಡೆಸಿದ್ದರು.
ತಮಿಳುನಾಡಿನಿಂದ ಕರ್ನಾಟಕ ಮೂಲಕ ಪರಾರಿಯಾಗಲು ಯತ್ನಿಸಿದ ವೇಳೆ ತಮಿಳುನಾಡು ಮತ್ತು ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಹಾಸನ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಮುಂಭಾಗ ಪೊಲೀಸರು ಆತನ ಕಾರನ್ನು ಅಡ್ಡಗಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಳೆ (ಜನವರಿ 6) ಸುಪ್ರೀಂಕೋರ್ಟ್‌ನಲ್ಲಿ ಪೂರ್ವ ಜಾಮೀನು ಅರ್ಜಿ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ರಾಜೇಂದ್ರ ಬಾಲಾಜಿ ಅವರನ್ನು ಬಂಧಿಸಲಾಗಿದೆ. ರಾಜೇಂದ್ರ ಬಾಲಾಜಿ ಅವರ ವಿರುದ್ಧ ಅವಿನ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪವಿದೆ.