ಹಾಸನ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳಲ್ಲಿ ಸೋದರ ಸಂಬಂಧಿಯನ್ನೇ ಕೊಲೆಗೈದು ಆರೋಪಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗುರು ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ (34) ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದು, ರಾಮು ಕೊಲೆ ಮಾಡಿದವನು ಎನ್ನಲಾಗಿದೆ. ಜಮೀನು ಖರೀದಿ ವಿಷಯದಲ್ಲಿ ಕಳೆದೆರಡು ವರ್ಷಗಳಿಂದ ಇಬ್ಬರ ನಡುವೆ ವೈಮನಸ್ಯವಿತ್ತು. ಇದೇ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ರಾಮು, ಮಂಜುನಾಥನಿಗೆ ಚಾಕುವಿನಿಂದ ಮೂರ್ನಾಲ್ಕು ಬಾರಿ ಇರಿದು ಪರಾರಿಯಾಗಿದ್ದಾನೆ. ಪರಿಣಾಮ ಮಂಜುನಾಥ್ ಸಾವಿಗೀಡಾಗಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.