ಹಾಸನ: ಕೊರೊನಾ ಮೂರನೇ ಅಲೆ ಅಬ್ಬರದ ನಡುವೆ ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಇಂದು ಮಂಡಯಾಗಲಿರುವ ಕೇಂದ್ರ ಬಜೆಟ್ ವಿಚಾರವಾಗಿ ಹಾಸನದ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದಾರೆ.
ಹಾಸನ ಜಿಲ್ಲೆ ಎಂದರೆ ಜೆಡಿಎಸ್ ಭದ್ರಕೋಟೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸ್ಥಾನದಲ್ಲಿರುವ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳುವ ಮೂಲಕ ಕೇಸರಿ ಬಾವುಟ ಹಾರಿಸಿದರು.
ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಮೂಲಕ ಸಾಕಷ್ಟು ಅನುದಾನವನ್ನು ತರುವ ಮುಖೇನ ಶಾಸಕ ಪ್ರೀತಂ ಜೆ ಗೌಡ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಇದು ಜೆಡಿಎಸ್ ಪಾಲಿಗೆ ನುಂಗಲಾಗದ ಬಿಸಿ ತುಪ್ಪವಾಗಿದೆ. ಇಂದು ಮಂಡನೆಯಾಗಲಿರುವ ಬಜೆಟ್ನಲ್ಲಿ ಹಾಸನ ಜಿಲ್ಲೆಗೂ ಕೂಡ ಸಿಂಹಪಾಲು ಇದೆ ಎನ್ನಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಳೆದ ಏಳು ವರ್ಷಗಳಿಂದ ಜನರು ಬೇಡಿಕೆ ಇಟ್ಟಿದ್ದ ರೈಲ್ವೆ ಯೋಜನೆಗಳು, ಐಐಟಿ ಹಾಗೂ ನೀರಾವರಿ ಸೇರಿದಂತೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಕೃಷಿಕರಿಗೆ ಬೇಕಾಗುವ ಸಲಕರಣೆಗಳನ್ನು ತೆರಿಗೆ ರಹಿತವಾಗಿ ಖರೀದಿಸಲು ಅವಕಾಶ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯೇ ಐಐಟಿ ಹಾಸನಕ್ಕೆ ಬರುವ ಸಾಧ್ಯತೆ ಇತ್ತು.
ಆದರೆ, ಉತ್ತರ ಕರ್ನಾಟಕದ ಮತ್ತು ಕಲ್ಯಾಣ ಕರ್ನಾಟಕದ ಭಾಗಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಕಳೆದ ಬಾರಿ ಅಲ್ಲಿಗೆ ನೀಡಲಾಗಿತ್ತು. ಇನ್ನು ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಯಾಗಿದ್ದು ಕಾಮಗಾರಿ ಕೂಡ ಮಂದಗತಿಯಲ್ಲಿ ಸಾಗುತ್ತಿದೆ. ಈ ಬಾರಿ ಬಜೆಟ್ನಲ್ಲಿ ವಿಮಾನ ನಿಲ್ದಾಣಕ್ಕೆ ಅನುದಾನವನ್ನು ನೀಡಬಹುದು, ಜೊತೆಗೆ ಹಾಸನ - ದುದ್ದ - ತಿಪಟೂರು ಮಾರ್ಗದ ಹಾಗೂ ಸಕಲೇಶಪುರ ಬೇಲೂರು ಚಿಕ್ಕಮಗಳೂರು ಭಾಗದ ರೈಲ್ವೆ ಯೋಜನೆಗಳಿಗೆ ಮುನ್ನುಡಿ ಬರೆಯಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟ ಆರೋಪ: ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ವಿರುದ್ಧ ಎಫ್ಐಆರ್
ಇದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಬೇಕಾಗುವಂತಹ ಟ್ರ್ಯಾಕ್ಟರ್, ಅದರ ಬಿಡಿಭಾಗಗಳು ಹಾಗೂ ಯಂತ್ರೋಪಕರಣಗಳನ್ನು ರೈತರು ಖರೀದಿಸಿದರೆ ಅದಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂಬುದು ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ. ತಂಬಾಕು ಬೆಳೆಗಾರರಿಗೆ ಉತ್ತೇಜನ ನೀಡುವ ಜೊತೆಗೆ ತಂಬಾಕು ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡಬೇಕು ಮತ್ತು ಮದ್ಯದ ಬೆಲೆ ತಗ್ಗಿಸಬೇಕು ಎಂದು ಮದ್ಯಪ್ರಿಯರು ನಿರೀಕ್ಷಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ