ಹಾಸನ: ನಿನ್ನೆ ಸಿಎಂ ಬಿಎಸ್ವೈ ಮಂಡಿಸಿದ ಬಜೆಟ್ನಲ್ಲಿ ಹಾಸನ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆಂದು ಜಿಲ್ಲೆಯ ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಜೆಟ್ ಬಗ್ಗೆ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿರುವ ಜಿಲ್ಲೆಯ ಮಂದಿ ಬಜೆಟ್ನಲ್ಲಿ ಹಾಸನ ಜನತೆಯ ಬಹುನಿರೀಕ್ಷಿತ ಬೇಡಿಕೆಗಳಿಗೆ ಮನ್ನಣೆ ನೀಡಿಲ್ಲವೆಂದಿದ್ದಾರೆ.
ಅಲ್ಲದೇ ಬಜೆಟ್ನಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಬಿಟ್ಟರೆ, ಕೃಷಿಗಾಗಲೀ, ನೀರಾವರಿಗಾಗಲೀ, ಹೆಚ್ಚು ಒತ್ತು ನೀಡಿಲ್ಲ. ಮಾನವ-ಪ್ರಾಣಿ ಸಂಘರ್ಷಕ್ಕೆ ತೆರೆ ಎಳೆಯುವ ಯಾವ ಯೋಜನೆಯನ್ನ ಘೋಷಣೆ ಮಾಡಿಲ್ಲ. ನೀರಾವರಿ ಕ್ಷೇತ್ರಕ್ಕೆ ಅಲ್ಪ ಪ್ರಮಾಣದ ಅನುದಾನ ಕೊಟ್ಟು ನಿರಾಸೆ ಮೂಡಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಆನೆಕಾರಿಡಾರ್, ರೈಲ್ವೆ ಕಂಬಿ ನಿರ್ಮಾಣ, ಕುಡಿಯುವ ನೀರು, ಕರೆಕಟ್ಟೆ ತುಂಬಿಸುವ ಯೋಜನೆ, ಹೊಸ ಕಾಲೇಜು ಸ್ಥಾಪನೆ, ಹೀಗೆ ಹತ್ತು ಹಲವು ನಿರೀಕ್ಷೆಗಳು ಹುಸಿಯಾಗಿವೆ. ಇನ್ನು ರಾಜ್ಯಕ್ಕೆ ಅನ್ವಯವಾಗುವಂತೆ ಆಟೋ ಚಾಲಕರ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ವಾರ್ಷಿಕ 2,000 ನೀಡುತ್ತಿರುವುದು ಕೊಂಚ ಮಟ್ಟಿಗೆ ಖುಷಿ ತಂದಿದೆ. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನ ಹೆಚ್ಚಳ ಮಾಡಿರುವುದರಿಮದ ಗ್ರಾಹಕರ ಮತ್ತು ವಾಹನ ಚಾಲಕರ ಜೇಬಿಗೆ ಕತ್ತರಿ ಬಿದ್ದಿದೆ ಎಂದರು.
ಬೆಂಗಳೂರಿಗೆ ಭರಪೂರ ಕೊಡುಗೆ ನೀಡಿರುವ ಮುಖ್ಯಮಂತ್ರಿಗಳು ಜಿಲ್ಲೆಯನ್ನ ಕಡೆಗಣಿಸಿದ್ದಾರೆ ಎಂದರೆ ತಪ್ಪಾಗದು. ಒಟ್ಟಾರೆ, ಯಡಿಯೂರಪ್ಪನವರ ಬಜೆಟ್ ನಲ್ಲಿ ಜಿಲ್ಲೆಗೆ ಉಪ್ಪು-ಹುಳಿ-ಖಾರ ಅಥವಾ ಸಿಹಿಯಾಗಲೀ ಕಾಣದೇ ಇರುವುದು ಜಿಲ್ಲೆಯ ಜನರ ಬೇಸರಕ್ಕೆ ಕಾರಣವಾಗಿದೆ.