ಹಾಸನ: ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿರುವ ಮಾಧ್ಯಮವು ನನಗೆ ಕಣ್ಣು-ಕಿವಿಯಾಗಿ ಇರಬೇಕು. ಇಬ್ಬರೂ ಒಟ್ಟಿಗೆ ಸೇರಿ ಜಿಲ್ಲೆಯಲ್ಲಿ ಒಳ್ಳೆಯ ಸೇವೆ ಕೊಡೋಣ ಎಂದು ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀನಿವಾಸ್ ಗೌಡ ಕೋರಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದಿನ ಎಸ್ಪಿಗೆ ಬೀಳ್ಕೊಡಿಗೆ ಹಾಗೂ ನೂತನ ಎಸ್ಪಿಗೆ ಸ್ವಾಗತ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ನನಗೆ ಕಣ್ಣು, ಕಿವಿಯಾಗಿ ಮಾಧ್ಯಮ ಇರಬೇಕು. ಪ್ರಜಾಪ್ರಭುತ್ವದ ನಾಲ್ಕನೇಯ ಅಂಗ ಮಾಧ್ಯಮ ಎಂದು ಕರೆಯುತ್ತಾರೆ. ನಾವು ಕರ್ತವ್ಯದಲ್ಲಿ ಏನಾದರೂ ಎಡವುತ್ತಿದ್ದೀವಿ ಎಂದಾಗ ನಮಗೆ ಸಲಹೆ ನೀಡಿ, ತಪ್ಪು ಆಗದಂತೆ ನಾವು ಬದಲಾಯಿಸಿಕೊಳ್ಳುತ್ತೇವೆ ಎಂದರು.
ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್ ರವರು ಮಾಧ್ಯಮದ ಬಗ್ಗೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದು, ಅವರಿಗೆ ನೀಡಿರುವ ಸಹಕಾರವನ್ನು ನಮಗೂ ಕೊಡಬೇಕು. ನನ್ನ ಜಿಲ್ಲೆ ಒಳ್ಳೆಯ ಜಾಗವಾಗಿದೆ. ಉತ್ತಮ ಕೆಲಸ ಮಾಡಲು ಸಹಕರಿಸಿ, ನಮ್ಮ ಕಡೆಯಿಂದ ಒಳ್ಳೆಯ ಕೆಲಸಕ್ಕೆ ಯಾವಾಗಲು ಬೆಂಬಲ ಇದ್ದೇ ಇರುತ್ತದೆ. ಜಿಲ್ಲೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಮಾಧ್ಯಮದಿಂದ ಬರುವ ಮಾಹಿತಿಗಳು ಅತ್ಯಮೂಲ್ಯವಾಗಿರುವುದರಿಂದ ಯಾವುದೇ ಸಮಯದಲ್ಲಿ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಿದರು.
ಬೆಂಗಳೂರಿಗೆ ವರ್ಗಾವಣೆ ಪಡೆದಿರುವ ರಾಮ್ ನಿವಾಸ್ ಸೆಪಟ್ ರವರು ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ, ಹಾಸನ ಜಿಲ್ಲೆಗೆ ಬಂದು ಐದುವರೆ ತಿಂಗಳು ಕೆಲಸ ಮಾಡಿದ್ದೇನೆ. ಮಾಧ್ಯಮ ಮತ್ತು ಪೊಲೀಸ್ ನಡುವೆ ಇಂತಹ ಸಂಬಂಧವನ್ನು ನಾನು ಎಲ್ಲೂ ನೋಡಿಲ್ಲ. ಇದೊಂದು ರಾಜ್ಯಕ್ಕೆ ಮಾದರಿ ಜಿಲ್ಲೆ. ಜಿಲ್ಲಾಡಳಿತದ ಸಹಕಾರ, ಮಾಧ್ಯಮದ ಮತ್ತು ಜನರ ಸಹಕಾರ ನಾನು ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು ಎಂದರು.