ಹಾಸನ: ನಗರದಲ್ಲಿ ನೆತ್ತರು ಹರಿದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿವೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.
ರಮೇಶ್ (35) ಕೊಲೆಯಾದ ವ್ಯಕ್ತಿಯಾಗಿದ್ದು, ಈತ ಹಾಸನ ತಾಲೂಕಿನ ಚಿಕ್ಕಗೇಣಿಗೆರೆ ಗ್ರಾಮದವನು ಎಂದು ತಿಳಿದುಬಂದಿದೆ. ನಗರದ ರಾಘವೇಂದ್ರ ಕಾಲೋನಿ ಬಳಿ ಬೈಕ್ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ರಮೇಶನನ್ನು ಕೊಲೆಗೈದಿದ್ದಾರೆ.
ಪಿತೃಪಕ್ಷವಿದ್ದ ಕಾರಣ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ವಾಪಸ್ ಚಿಕ್ಕಗೇಣಿಗೆರೆ ಗ್ರಾಮಕ್ಕೆ ತೆರಳುವ ವೇಳೆ ಮೂರು ಮಂದಿ ದುಷ್ಕರ್ಮಿಗಳು ಬೈಕಿನಲ್ಲಿ ತೆರಳುತ್ತಿದ್ದ ರಮೇಶನನ್ನು ಅಡ್ಡಗಟ್ಟಿ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಬಲವಾದ ಮಾರಕಾಸ್ತ್ರಗಳಿಂದ ಹೊಡೆದ ಪರಿಣಾಮ ಸ್ಥಳದಲ್ಲಿಯೇ ರಮೇಶನ ಪ್ರಾಣಪಕ್ಷಿ ಹಾರಿಹೋಗಿದೆ. ಕೊಲೆ ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಮೇಶ್ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಹಿಂದೆ ಹಣದ ವಿಚಾರವಾಗಿ ಕೆಲವರೊಂದಿಗೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ, ಮೂರು ದಿನಗಳ ಹಿಂದೆ ಕೆಲ ಸ್ನೇಹಿತರ ನಡುವೆ ಜಗಳ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಬೀರನಹಳ್ಳಿ ಕೆರೆಯ ಸಮೀಪ ರಾಘವೇಂದ್ರ ಕಾಲೋನಿಯಲ್ಲಿ ಬಡ್ಡಿ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಬಹುತೇಕ ಹಣದ ವಿಚಾರವಾಗಿಯೇ ರಮೇಶ ಕೊಲೆ ಆಗಿರಬಹುದು ಎಂದು ಸ್ಥಳೀಯರು ಕೂಡ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸ್ಥಳಕ್ಕಾಗಮಿಸಿದ ಬಡಾವಣೆ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೊಲೆ ಆರೋಪಿಗಳಿಗಾಗಿ ಎಸ್ಪಿ ರಾಮನಿವಾಸ್ ಸೆಪಟ್ ಆದೇಶದ ಮೇರೆಗೆ ವಿಶೇಷ ತಂಡ ರಚಿಸಲಾಗಿದೆ. ಇನ್ನು ಈ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.