ಹಾಸನ: ಹಾಸನದ ಮಾರಗೋಡನಹಳ್ಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಭೂಮಿಗೋಸ್ಕರ ನಡೆದಿದ್ದ ಕೊಲೆ
ಜಮೀನು ವಿವಾದದಲ್ಲಿ ದಾಯಾದಿಗಳ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾರಗೊಂಡನಹಳ್ಳಿಯಲ್ಲಿ ನಡೆದಿತ್ತು. ಘಟನೆಯಲ್ಲಿ 58 ವರ್ಷದ ಮಲ್ಲೇಶ್, ರವಿಕುಮಾರ್(35), ಮಂಜೇಶ್(35), ಹಾಗೂ ಕೊಲೆ ಮಾಡಿದ್ದ ಆರೋಪಿ ಪಾಪಣ್ಣಿ ಕೂಡ ಚಾಕುವಿನಿಂದ ತಿವಿದುಕೊಂಡು ಸಾವನ್ನಪ್ಪಿದ್ದನು.
ಇದೀಗ ಪ್ರಕರಣ ಬೇಧಿಸಿರುವ ಪೊಲೀಸರು ಮಾರಗೊಡನಹಳ್ಳಿಯ(ಕೊಲೆಗೆ ಕುಮ್ಮಕ್ಕು) ಪ್ರದೀಪ್, ಯೋಗೇಶ್, ರವಿ ಮತ್ತು ಸಚಿನ್ (ಭಾನು) ಎಂಬುವವರನ್ನ ಬಂಧನ ಮಾಡಿದ್ದಾರೆ. ಮೇ.24ರಂದು ಮಲ್ಲೇಶ್, ಮಂಜೇಶ್ ಮತ್ತು ರವಿಕುಮಾರ್ ಎಂಬುವನನ್ನು ಮೃತ ಪಾಪಣ್ಣಿ ಚಾಕುವಿನಿಂದ ಕೊಲೆಗೈದಿದ್ದನು.
ಜಮೀನು ವಿಚಾರವಾಗಿ ಇವರು 20 ವರ್ಷಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ಮಲ್ಲೇಶ್ ಪರವಾಗಿ ಬಂದಿತ್ತು. ಜಮೀನಿನಲ್ಲಿ ಉಳುಮೆ ಮಾಡಲು ಹೋಗಿದ್ದಾಗ ಜಮೀನಿನಲ್ಲಿ ಕ್ಯಾತೆ ತೆಗೆದ ಪಾಪಣ್ಣಿ ತಾನು ತಂದಿದ್ದ ಚಾಕುವಿನಿಂದ ಮಲ್ಲೇಶ್ ಸೇರಿದಂತೆ ಮೂರು ಮಂದಿಯ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದನು.
ಆರೋಪಿಗಳ ಬಂಧನ
ಘಟನೆ ನಡೆದ ಬಳಿಕ ಪ್ರದೀಪ್, ಯೋಗೇಶ್, ರವಿ ಮತ್ತು ಸಚಿನ್ ತಲೆ ಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚನೆ ಮಾಡಿದ್ದ ಪೊಲೀಸರು ಇದೀಗ ಅವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಪಂಶುಸಂಗೋಪನೆ ಇಲಾಖೆ ಅಭಿವೃದ್ಧಿ ಕುಂಠಿತವಾದರೆ ಶಿಸ್ತುಕ್ರಮ:ಪ್ರಭು ಚವ್ಹಾಣ್ ಎಚ್ಚರಿಕೆ
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 62/2021 ಕಲಂ-143, 147, 148, 447, 504, 324, 307, 302 ರೆ/ವಿ 149 ಐಪಿಸಿ ರೀತ್ಯ ಪ್ರಕರಣ ದಾಖಲಾಗಿವೆ.