ಹಾಸನ : ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಇದು ಯಾವುದೇ ಉಗ್ರಗಾಮಿ ಕೃತ್ಯಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ವೈಯಕ್ತಿಕ ದ್ವೇಷದಿಂದ ನಡೆದಿರುವ ಘಟನೆ ಎಂದು ಎಸ್‌ಪಿ ಹರಿರಾಂ ಶಂಕರ್ ಸ್ಪಷ್ಟಪಡಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ, 'ಕೃತ್ಯದಲ್ಲಿ ಯಾವುದೇ ಉಗ್ರ ಸಂಘಟನೆ ಅಥವಾ ಉಗ್ರಗಾಮಿಗಳ ಕೈವಾಡವಿಲ್ಲ. ಯಾರು ಈ ಪಾರ್ಸೆಲ್ ಅನ್ನು ತೆಗೆದುಕೊಳ್ಳಬೇಕಿತ್ತೋ ಆ ವ್ಯಕ್ತಿಯನ್ನು ಗುರಿಯಾಗಿಸಿ ಕೃತ್ಯ ಎಸಗಲಾಗಿದೆ. ಇದರಲ್ಲಿ ಉಗ್ರರು ನಡೆಸುವ ರೀತಿಯ ಯಾವುದೇ ಸ್ಫೋಟಕ ತಂತ್ರಜ್ಞಾನವನ್ನು ಬಳಸಿಲ್ಲ' ಎಂದು ಹೇಳಿದರು.
ಸ್ಥಳಕ್ಕೆ ಮೈಸೂರಿನಿಂದ ಎಫ್ಎಸ್ಎಲ್ ತಂಡ ಆಗಮಿಸಿದ್ದು, ಕೆಲವು ಅವಶೇಷಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.
'ಎಲೆಕ್ಟ್ರಾನಿಕ್ ಸರ್ಕ್ಯೂಟ್‌ನಿಂದ ಇಷ್ಟು ದೊಡ್ಡ ಪ್ರಮಾಣದ ಸ್ಪೋಟ ಸಂಭವಿಸಲು ಸಾಧ್ಯವಿಲ್ಲ. ಬದಲಿಗೆ ಸಣ್ಣ ಮಟ್ಟದ ಸ್ಪೋಟಕ ವಸ್ತುಗಳನ್ನು ಬಳಸಿ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಯಾವುದೇ ಊಹಾಪೋಹಗಳನ್ನು ನಂಬಬಾರದು. ಕೊರಿಯರ್ ಪಡೆದು ವಾಪಸ್ ನೀಡಿದವರನ್ನು ಹಾಗೂ ಕೊರಿಯರ್ ಮಾಡಿದವರನ್ನು ವಶಕ್ಕೆ ಪಡೆಯಲಾಗಿದೆ. ಪಾರ್ಸಲ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ' ಎಂದು ಎಸ್‌ಪಿ ವಿವರಿಸಿದರು.
ಇದನ್ನೂ ಓದಿ: ಹಾಸನದಲ್ಲಿ ಕೊರಿಯರ್ ಮೂಲಕ ಬಂದ ಮಿಕ್ಸಿ ಬ್ಲಾಸ್ಟ್! ಮಾಲೀಕನಿಗೆ ಗಂಭೀರ ಗಾಯ
ಮಿಕ್ಸಿ ಪ್ರಕರಣಕ್ಕೆ ಟ್ವಿಸ್ಟ್: ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಮಾಜಿ ಪ್ರೇಯಸಿ ಮೇಲಿನ ಸಿಟ್ಟಿಗೆ ಆಕೆಗೆ ಬುದ್ಧಿ ಕಲಿಸಲು ವ್ಯಕ್ತಿಯೋರ್ವ ಬೆಂಗಳೂರಿನಿಂದ ಮಿಕ್ಸಿ ಕಳಿಹಿಸಿದ್ದ ಎನ್ನಲಾಗುತ್ತಿದೆ. ಆದ್ರೆ ಈ ಸಂಬಂಧ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ.