ಹಾಸನ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮತ್ತೊಂದು ಅತ್ಯಾಧುನಿಕ ಸೌಲಭ್ಯಗಳುಳ್ಳ ಕೋವಿಡ್ ಕೇರ್ ಸೆಂಟರ್ನನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಯಾವುದೇ ರೋಗಲಕ್ಷಣಗಳಿಲ್ಲದೆ ಇರುವ ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ, ಚಿಕಿತ್ಸೆ ನೀಡುವ ಸಲುವಾಗಿ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಪ್ರತ್ಯೇಕ ಕಟ್ಟಡವೊಂದರಲ್ಲಿ ಸುಮಾರು 300 ಹಾಸಿಗೆಯುಳ್ಳ ಕೋವಿಡ್ ಕೇರ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಪ್ರತ್ಯೇಕ ಕೊಠಡಿಗಳು, ವ್ಯವಸ್ಥಿತ ಶೌಚಾಲಯ, ವೈದ್ಯರ ವಿಶ್ರಾಂತಿ ಕೊಠಡಿ, ಧ್ವನಿ ವರ್ಧಕ ವ್ಯವಸ್ಥೆ ಈ ಕಟ್ಟಡದಲ್ಲಿ ಅಭ್ಯವಿದೆ. ಧರ್ಮಸ್ಥಳ ಆಯುರ್ವೇದ ಕಾಲೇಜು ಸಂಸ್ಥೆ ತನ್ನ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್‌ನ್ನು ಈ ಸೌಲಭ್ಯಕ್ಕಾಗಿ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದೆ.
ಜಿಲ್ಲೆಯ ಶ್ರೀ ಧರ್ಮಸ್ಥಳ ವೈದ್ಯಕೀಯ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಭೇಟಿ ನೀಡಿದರು. ಕೋವಿಡ್ ಸೋಂಕಿತರಿಗಾಗಿ ಇರುವ ಪ್ರತೇಕ ಕೊಠಡಿ, ವೈದ್ಯಕೀಯ ಸಿಬ್ಬಂದಿಯ ಕೊಠಡಿಗಳು, ಶೌಚಾಲಯದ ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆ ಹಾಗೂ ಬೆಡ್‌ಗಳ ವ್ಯವಸ್ಥೆ ಕುರಿತು ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್. ಗಿರೀಶ್, ಕೊರೊನಾ ಸೋಂಕಿನ ಯಾವುದೇ ರೋಗಲಕ್ಷಣಗಳು ಕಂಡುಬಾರದ ಸೋಂಕಿತರಿಗಾಗಿ ಈ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಮಾಡಲಾಗಿದೆ. ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದವರನ್ನು ಮನೆಗೆ ಕಳುಹಿಸಲಾಗುತ್ತದೆ. ಪರಿಸ್ಥಿತಿ ವಿಷಮವಾದಲ್ಲಿ ಅಂತಹವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂದರು.