ಹಾಸನ : ಜಿಲ್ಲೆಯಲ್ಲಿಂದು ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಈ ಮೂಲಕ ಚುನಾವಣೆಯ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಾಸನದಲ್ಲಿ ಹಾಲಿ ಶಾಸಕ ಪ್ರೀತಂ ಗೌಡ ನಾಮಪತ್ರ ಸಲ್ಲಿಸಿದ್ರೆ, ಜೆಡಿಎಸ್ ಪಕ್ಷದ ವತಿಯಿಂದ ಹೆಚ್.ಪಿ.ಸ್ವರೂಪ್ ನಾಮಪತ್ರ ಸಲ್ಲಿಸಿದರು. ಚೆನ್ನರಾಯಪಟ್ಟಣದಿಂದ ಜೆಡಿಎಸ್ನ ಬಾಲಕೃಷ್ಣ ತಮ್ಮ ಉಮೇದುವಾರಿಕೆ ಸಲ್ಲಿಸಿದರೆ, ಕೆಆರ್ಎಸ್ ಪಕ್ಷದಿಂದ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದರು. ಪ್ರಜಾಕೀಯ ಪಕ್ಷದಿಂದ ಕಿರಣ್ ಟಿ.ಕೆ.ತಮ್ಮ ಉಮೇದುವಾರಿಕೆ ಸಲ್ಲಿಸಿದರೆ, ಎಎಪಿ ಪಾರ್ಟಿಯಿಂದ ಮಂಜೇಗೌಡ ನಾಮಪತ್ರವನ್ನು ಸಲ್ಲಿಸಿದರು.
ಬಿಜೆಪಿಯಿಂದ ವಕೀಲ ದೇವರಾಜೇಗೌಡ ನಾಮಪತ್ರ: ಹೊಳೆನರಸೀಪುರದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಒಂದೇ ದಿನ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಮ್ಮ ಪತ್ನಿಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರೆ, ಅದೇ ರೀತಿ ಬಿಜೆಪಿಯಿಂದ ವಕೀಲ ದೇವರಾಜೇಗೌಡ ನಾಮಪತ್ರ ಸಲ್ಲಿಸಿದರು.
ಬೇಲೂರಲ್ಲಿ ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕ ಕೆ.ಎಸ್.ಲಿಂಗೇಶ್, ಕಳೆದ ಬಾರಿಯ ಪರಾಜಿತ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಮಗದೊಮ್ಮೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ರೆ, ಮಾಜಿ ಸಚಿವ ಬಿ.ಶಿವರಾಂ ಕಾಂಗ್ರೆಸ್ ಪಕ್ಷದಿಂದ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಅರಕಲಗೂಡಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದು, ಬಿಜೆಪಿಯಿಂದ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಯೋಗಾರಮೇಶ್ ಹಾಗೂ ಜೆಡಿಎಸ್ ಪಕ್ಷದಿಂದ ಎ ಮಂಜು ಪತ್ನಿ ತಾರಾರೊಂದಿಗೆ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣನೊಂದಿಗೆ ಪ್ರತ್ಯೇಕವಾಗಿ ಎರಡು ನಾಮಪತ್ರ ಸಲ್ಲಿಸಿದರು.
ಅರಸೀಕೆರೆಯಲ್ಲಿ ಜೆಡಿಎಸ್ ಪಕ್ಷದಿಂದ ಎನ್.ಆರ್.ಸಂತೋಷ್, ಬಿಜೆಪಿ ಪಕ್ಷದಿಂದ ಜಿ.ವಿ.ಟಿ.ಬಸವರಾಜ್ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ರೆ, ಹಾಸನ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಆರ್.ಪಿ.ಸತೀಶ್ ನಾಮಪತ್ರ ಸಲ್ಲಿಸಿದ್ದಾರೆ.
27 ನಾಮಪತ್ರ ಸಲ್ಲಿಕೆ: ಒಟ್ಟಾರೆ ಹಾಸನ ಜಿಲ್ಲೆಯಲ್ಲಿ ಇವತ್ತು ಜೆಡಿಎಸ್ ಪಕ್ಷದಿಂದ 11, ಬಿಜೆಪಿ ಪಕ್ಷದಿಂದ 6, ಕಾಂಗ್ರೆಸ್ ಪಕ್ಷದಿಂದ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಎಎಪಿ ಯಿಂದ ಎರಡು ಹಾಗೂ ಇತರೆ ಐದು ನಾಮಪತ್ರಗಳು ಸೇರಿ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಪಕ್ಷದ ಹಾಲಿ ಶಾಸಕರು ಹಾಗೂ ಹೊಸ ಅಭ್ಯರ್ಥಿಗಳು ತನ್ನ ಶಕ್ತಿ ಪ್ರದರ್ಶನ ತೋರ್ಪಡಿಸಿದ್ದು, ಇನ್ನುಳಿದಂತೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಉಮೇದುವಾರಿಕೆಗಳನ್ನು ವಿವಿಧ ಪಕ್ಷದ ಅಭ್ಯರ್ಥಿಗಳು ಸಲ್ಲಿಸಿದರು.
ಇವತ್ತು ಪೂರ್ವಭಾದ್ರ ನಕ್ಷತ್ರ ಆಗಿರುವುದರಿಂದ, ನಾಮಪತ್ರ ಸಲ್ಲಿಕೆ ಮಾಡಲು ಉತ್ತಮ ಮತ್ತು ಶ್ರೇಷ್ಠ ದಿನ ಎಂಬ ಜ್ಯೋತಿಷ್ಯರ ಮಾತಿನ ಪ್ರಕಾರ ಬಹುತೇಕ ಘಟಾನುಘಟಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನುಳಿದಂತೆ ಬೇಲೂರಿನ ಕಾಂಗ್ರೆಸ್ ಅಭ್ಯರ್ಥಿ ಹೊರತುಪಡಿಸಿ, ಸಕಲೇಶಪುರ, ಅರಸೀಕೆರೆ, ಶ್ರವಣಬೆಳಗೊಳ, ಹೊಳೆನರಸೀಪುರ, ಅರಕಲಗೂಡು ಮತ್ತು ಹಾಸನ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯಾವ ಅಭ್ಯರ್ಥಿಗಳು ಇವತ್ತು ನಾಮಪತ್ರ ಸಲ್ಲಿಸಿಲ್ಲ.
ಇದನ್ನೂ ಓದಿ : ರಾಜ್ಯ ವಿಧಾನಸಭಾ ಚುನಾವಣೆ.. ಡಿಕೆಶಿ, ಹೆಚ್ಡಿಕೆ, ನಿಖಿಲ್ ಕುಮಾರಸ್ವಾಮಿ ಉಮೇದುವಾರಿಕೆ ಸಲ್ಲಿಕೆ